ಮೈಸೂರು ವಿಶ್ವವಿದ್ಯಾನಿಲಯಕ್ಕೆ 101ನೇ ಘಟಿಕೋತ್ಸವ ಸಂಭ್ರಮ: ಇಬ್ಬರಿಗೆ ಗೌಡಾ​, 29,852 ಮಂದಿಗೆ ಪದವಿ ಪ್ರದಾನ

mysore vv
Published on

ಮೈಸೂರು: ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿರುವ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಇಂದು 101ನೇ ಘಟಿಕೋತ್ಸವದ ಸಂಭ್ರಮ ಕಳೆಗಟ್ಟಿತ್ತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ಮೈಸೂರು ವಿವಿಯ ಕ್ರಾಫರ್ಡ್ ಭವನದಲ್ಲಿ ನಡೆದ ಘಟಿಕೋತ್ಸವದಲ್ಲಿ ಇಬ್ಬರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜೀವರಾಸಾಯನಶಾಸ್ತ್ರ ವಿಭಾಗದ ಗೌರವ ಪ್ರಾಧ್ಯಾಪಕ ಪದ್ಮಭೂಷಣ ಡಾ. ಗೋವಿಂದರಾಜನ್ ಪದ್ಮನಾಭನ್ ಮತ್ತು ರಾಜ್ಯ ಸರ್ಕಾರದ ವಿಷನ್ ಗ್ರೂಪ್ ಫಾರ್ ಸ್ಟಾರ್ಟ್ಅಪ್ಸ್​ನ ಅಧ್ಯಕ್ಷರೂ ಆದ ಆಕ್ಸೆಲ್ ಇಂಡಿಯಾ ಸಂಸ್ಥಾಪಕ ಪಾಲುದಾರ ಪ್ರಶಾಂತ್ ಪ್ರಕಾಶ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಯಿತು.

ನವದೆಹಲಿಯ ಸಿಎಸ್ಐಆರ್​ನ ಮಹಾನಿರ್ದೇಶಕ ಹಾಗೂ ಡಿಎಸ್ಐಆರ್ ಕಾರ್ಯದರ್ಶಿ ಡಾ. ಶೇಖರ್ ಸಿ. ಮಂಡೆ ಅವರು ಘಟಿಕೋತ್ಸವ ಭಾಷಣ ಮಾಡಿದರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್ ಉಪಸ್ಥಿತರಿದ್ದರು.

29,852 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಈ ಬಾರಿ ಘಟಿಕೋತ್ಸವದಲ್ಲಿ 29,852 ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಯಿತು. ಇದರಲ್ಲಿ 20,118 ಮಂದಿ ಮಹಿಳೆಯರಿದ್ದರೆ, 9,734 ಪುರುಷರು ಇದ್ದಾರೆ. ವಿವಿಧ ಪದವಿ ಪಡೆದವರಲ್ಲಿ ಶೇ. 67.39 ಮಹಿಳೆಯರು ಮತ್ತು ಶೇ. 32.60 ಪುರುಷರು. ಪಿಎಚ್‌ಡಿ ಹೊರತುಪಡಿಸಿ ಎಲ್ಲ ವಿಭಾಗಗಳಲ್ಲಿ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ. 244 ಅಭ್ಯರ್ಥಿಗಳಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಯಿತು. ಇದರಲ್ಲಿ 98 ಮಂದಿ ಮಹಿಳೆಯರಿದ್ದರೆ, 146 ಪುರುಷರು.

  • 216 ಅಭ್ಯರ್ಥಿಗಳು ಒಟ್ಟು 387 ಪದಕಗಳು ಮತ್ತು 178 ಬಹುಮಾನ ಪಡೆದುಕೊಂಡರು. ಈ ಪೈಕಿ 172 ಮಹಿಳೆಯರು ಮತ್ತು 44 ಪರುಷರು.
  • 7,143 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿಗಳ ಪ್ರದಾನ ಮಾಡಲಾಯಿತು. ಇದರಲ್ಲಿ 4,876 (ಶೇ. 68.26%) ಮಹಿಳೆಯರು, 2,267 (31.73%) ಪುರುಷರು.
  • 22,465 ಅಭ್ಯರ್ಥಿಗಳಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಯಿತು. ಇದರಲ್ಲಿ 15,144 (ಶೇ.67.41%) ಮಹಿಳೆಯರು ಮತ್ತು 7,321 (ಶೇ.32.59%) ಪುರುಷರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net