

ಹನೂರು: ಪೊನ್ನಾಚಿಯ ಸಾಲೂರು ಸ್ವಾಮಿ ಕೃಪಾ ಪ್ರೌಢಶಾಲೆಯು ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಆಶಾಕಿರಣವಾಗಿದ್ದು, ಕಳೆದ 4 ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶವನ್ನು ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಶನಿವಾರ ಇಂಡಿಯಾ ಮಾರ್ಟ್ ಇಂಟರ್ ಮೆಸ್ ಲಿಮಿಟೆಡ್ ಹಾಗೂ ಹೆಲ್ಫ್ ಎಜ್ಯುಕೇಟ್ ಎ ಚೈಲ್ಡ್ ಸಂಸ್ಥೆಯ ವತಿಯಿಂದ 34 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸಾಲೂರು ಸ್ವಾಮಿ ಕೃಪಾ ಪ್ರೌಢಶಾಲೆಯ ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಮಠಗಳು ಪ್ರಾಚೀನ ಕಾಲದಿಂದಲೂ ತನ್ನದೆಯಾದ ವೈಶಿಷ್ಟೃತೆಯನ್ನು ಹೊಂದಿವೆ. ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಶರಣರ ಕಾಯಕ, ದಾಸೋಹ ಕಲ್ಪನೆಯಿಂದ ಮಠಗಳು ಪ್ರಜ್ಜಲಿಸಲು ಆರಂಭಿಸಿದವು. 20ನೇ ಶತಮಾನದಲ್ಲಿ ಕಾಯಕದ ಜತೆಗೆ ಶೈಕ್ಷಣಿಕ ಕ್ರಾಂತಿಗೂ ಅಡಿಗಲ್ಲು ಹಾಕಿದವು. ಈ ದೆಸೆಯಲ್ಲಿ ನಾಡಿನಲ್ಲಿ ಕಾಯಕ, ದಾಸೋಹ ಹಾಗೂ ಶೈಕ್ಷಣಿಕ ಪರಂಪರೆಯಲ್ಲಿ ಶ್ರೀ ಸಾಲೂರು ಬೃಹನ್ಮಠವು ಒಂದು. ಮಠದ ಹಿರಿಯ ಶ್ರೀಗಳು ಧಾರ್ಮಿಕತೆಯ ಜತೆಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದು, ಈ ಭಾಗದ ಬಡ ಮಕ್ಕಳಿಗೆ ಶಿಕ್ಷಣ ನೀಡುವ ಉದ್ಧೇಶದಿಂದ ಹಲವು ಕಡೆಗಳಲ್ಲಿ ಶಿಕ್ಷಣ ಸಂಸ್ಥೆಯನ್ನು ತೆರೆದು ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಇದರ ಫಲ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಬಹುತೇಕ ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆದು ಉತ್ತಮ ಭವಿಷ್ಯವನ್ನು ರೂಪಿಸಿಕೊಂಡಿರುವುದು ಸಾರ್ಥಕತೆಯ ಪ್ರತೀಕವಾಗಿದೆ ಎಂದರು.
ಪ್ರಸ್ತುತ ಹಿರಿಯ ಶ್ರೀಗಳ ಮಾರ್ಗದರ್ಶನ ಹಾಗೂ ಗ್ರಾಮಸ್ಥರ ಸಹಕಾರದಿಂದ ಪೊನ್ನಾಚಿ ಶಾಲೆಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಈ ಭಾಗದ ಮಕ್ಕಳ ಶಿಕ್ಷಣಕ್ಕೆ ಆಶಾಕಿರಣವಾಗಿದೆ. ಇದೀಗ ಇಂಡಿಯಾ ಮಾರ್ಟ್ ಇಂಟರ್ ಮೆಸ್ ಲಿಮಿಟೆಡ್ ಹಾಗೂ ಹೆಲ್ಫ್ ಎಜ್ಯುಕೇಟ್ ಎ ಚೈಲ್ಡ್ ಸಂಸ್ಥೆಯು ನೂತನ ಕಟ್ಟಡವನ್ನು ನಿರ್ಮಿಸಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.
ಸಂಸ್ಥೆಯ ಸಂಸ್ಥಾಪಕ ಬ್ರಿಜೇಶ್‌ಕುಮಾರ್ ಅಗರ್‌ವಾಲ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಸಾಲೂರು ಬೃಹನ್ಮಠದ ಕೊಡುಗೆ ಅಪಾರ. ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಹಿರಿಯ ಶ್ರೀಗಳು ಶಾಲೆಯನ್ನು ಆರಂಭಿಸಿ ಮುನ್ನುಡಿ ಬರೆದವರು. ಬಡಮಕ್ಕಳೇ ಹೆಚ್ಚು ಶಿಕ್ಷಣ ಪಡೆಯುತ್ತಿರುವ ಈ ಸಂಸ್ಥೆಗೆ ಕಟ್ಟಡವನ್ನು ನಿರ್ಮಿಸಿ ಕೊಡುವ ಭಾಗ್ಯ ನಮಗೆ ದೊರಕಿರುವುದು ಪುಣ್ಯದ ಕೆಲಸ ಎಂದರು.
ಹೆಲ್ಫ್ ಎಜ್ಯುಕೇಟ್ ಎ ಚೈಲ್ಡ್ ಸಂಸ್ಥೆಯ ಸಂಸ್ಥಾಪಕಿ ನಂದಪ್ರಸಾದ್, ದೇಗುಲದ ಆಗಮಿಕ ಕರವೀರಸ್ವಾಮಿ, ಮುಖಂಡ ಪೊನ್ನಾಚಿ ಮಹದೇವಸ್ವಾಮಿ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.