

ಬೆಂಗಳೂರು: ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಈ ಬಾರಿಯೂ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ 10 ಕೃಪಾಂಕ (ಗ್ರೇಸ್ ಮಾರ್ಕ್ಸ್) ನೀಡಲಿದೆ.
ಕೋವಿಡ್ 2ನೇ ಅಲೆಯಲ್ಲಿ ಮಕ್ಕಳಿಗೆ ಸರಿಯಾಗಿ ಪಾಠ-ಪ್ರವಚನ ನಡೆದಿರಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ 10 ಕೃಪಾಂಕ ನೀಡಲು ಇಲಾಖೆ ತೀರ್ಮಾನಿಸಿದೆ. ಮೂರು ವಿಷಯಗಳಲ್ಲಿ ಒಟ್ಟಾರೆ 10 ಕೃಪಾಂಕ ಅಗತ್ಯವಾರು ಹಂಚಿಕೆ ಮಾಡಿದಾಗ ವಿದ್ಯಾರ್ಥಿ ಪಾಸಾಗುವುದಾದರೆ ಮಾತ್ರ ಈ ಅವಕಾಶ ದೊರೆಯಲಿದೆ. 25 ಅಂಕ ಪಡೆದು "ಸಿ'' ಗ್ರೇಡ್ನಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡುವುದರಿಂದ ಬಹಳಷ್ಟು ಅನುಕೂಲವಾಗಲಿದೆ. 2021ರ ಪೂರಕ ಪರೀಕ್ಷೆಗಳಲ್ಲಿ ಗ್ರೇಸ್ ಅಂಕದಿಂದಾಗಿ ಶೇ.9 ವಿದ್ಯಾರ್ಥಿಗಳು ಉತ್ತೀರ್ಣವಾಗಿದ್ದರು.
ಸರಿಯಾದ ಬೋಧನೆ ಸಿಗದ ಮಕ್ಕಳಿಗೆ ಅನ್ಯಾಯ ಆಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. 2019ರಲ್ಲಿ 6 ವಿಷಯಗಳ ಪೈಕಿ ಎರಡು ವಿಷಯಗಳಿಗೆ 5 ಕೃಪಾಂಕ ನೀಡುವ ನಿಯಮವಿತ್ತು. 2020 ಮತ್ತು 2021ರಲ್ಲಿ ಮೂರು ವಿಷಯಗಳಿಗೆ 10 ಅಂಕ ನೀಡುವ ನಿಯಮವನ್ನು ತಾತ್ಕಾಲಿಕವಾಗಿ ಜಾರಿಗೆ ತರಲಾಗಿತ್ತು.