ಉಪ್ಪಿನಂಗಡಿ: ಇಲ್ಲಿಗೆ ಸಮೀಪದ 34ನೇ ನೆಕ್ಕಿಲಾಡಿ ಗ್ರಾಮದ ಆದರ್ಶನಗರದ ಕಜೆ ಎಂಬಲ್ಲಿ ನಿವೇಶನವೊಂದರಲ್ಲಿ ಅಕ್ರಮವಾಗಿ ಗೋ ಹತ್ಯೆಗೈದು ಮಾಂಸ ತಯಾರಿಸುತ್ತಿದ್ದ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ 96 ಕೆ.ಜಿ.ಗೋ ಮಾಂಸ, 1 ಬೈಕ್, ಹಾಗೂ ಒಂದು ಅಟೋರಿಕ್ಷಾವನ್ನು ವಶಪಡಿಸಿಕೊಂಡ ಘಟನೆ ಶನಿವಾರ ಸಂಭವಿಸಿದೆ.
ಕಜೆ ನಿವಾಸಿ ಖತಿಜಮ್ಮ ಎಂಬಾಕೆಯ ಒಡೆತನಕ್ಕೆ ಸೇರಿದ ಈ ನಿವೇಶನದಲ್ಲಿ ಅಕ್ರಮವಾಗಿ ಗೋ ಹತ್ಯೆ ನಡೆಸಲಾಗುತ್ತಿದೆ ಎಂಬ ಖಚಿತ ವರ್ತಮಾನದ ಮೇರೆಗೆ ಉಪ್ಪಿನಂಗಡಿ ಎಸ್‌ಐ ಅವಿನಾಶ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿತ್ತು. ಈ ವೇಳೆ ಸ್ಥಳದಲ್ಲಿದ್ದ ಐವರು ಆರೋಪಿಗಳು ಸಮೀಪದ ಕಾಡಿನತ್ತ ಓಡಿ ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಪರಾರಿಯಾಗಿರುವ ಆರೊಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ಪೊಲೀಸರು ಘಟನಾ ಸ್ಥಳದಲ್ಲಿದ್ದ 96 ಕೆ.ಜಿ.ಗೋ ಮಾಂಸ, ಒಂದು ಬೈಕ್ ಹಾಗೂ ಒಂದು ಆಟೋ ರಿಕ್ಷಾವನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.