9 ಜನರ ಗಂಟಲಿನ ದ್ರವ ಪ್ರಯೋಗಾಲಯಕ್ಕೆ

26KWR5B
Published on

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 9 ಜನರಿಗೆ ಕರೊನಾ ಶಂಕೆಯ ಹಿನ್ನೆಲೆಯಲ್ಲಿ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ.

ಭಟ್ಕಳದ ಇಬ್ಬರನ್ನು ಬಿಟ್ಟರೆ ಬೇರ್ಯಾರಿಗೂ ಕರೊನಾ ಇರುವುದು ಖಚಿತವಾಗಿಲ್ಲ.

ಜಿಲ್ಲೆಯಲ್ಲಿ 400 ಕ್ಕೂ ಅಧಿಕ ಜನರನ್ನು ಗೃಹ ಉಸ್ತುವಾರಿಯಲ್ಲಿ ಇರಿಸಲಾಗಿದ್ದು, ಅವರೆಲ್ಲರಿಗೂ ಸೀಲ್ ಹಾಕಲಾಗಿದೆ. ಮನೆಯ ಹೊರಗೆ ಕರಪತ್ರವೊಂದನ್ನು ಅಂಟಿಸಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಕ್ರಿಮ್್ಸ ಆಸ್ಪತ್ರೆಯಲ್ಲಿ ರೋಗಿಗಳ ಪರೀಕ್ಷೆಗೆ ಹೊರಗೇ ಒಂದು ಕೇಂದ್ರ ತೆರೆಯಲಾಗಿದೆ. ಒಳಗೆ ಕರೊನಾ ಸೋಂಕಿತರ ಚಿಕಿತ್ಸೆಗೆ ಸಾಕಷ್ಟು ವಾರ್ಡ್​ಗಳನ್ನು ಸಿದ್ಧಪಡಿಸಿ ಇರಿಸಲಾಗಿದೆ.

ಶೈಕ್ಷಣಿಕ ಕಾರ್ಯಕ್ರಮಗಳು ಮುಂದಕ್ಕೆ: ಕರೊನಾ ಹಿನ್ನೆಲೆಯಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ, 7 ಮತ್ತು 8 ನೇ ತರಗತಿ ಪರೀಕ್ಷೆ, ಆರ್​ಟಿಇ ದಾಖಲಾತಿ, ಹೊಸ ದಾಖಲಾತಿಗಳನ್ನು ಮುಂದೂಡಲಾಗಿದೆ ಎಂದು ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ. ಅವುಗಳ ವೇಳಾ ಪಟ್ಟಿಯನ್ನು ಏಪ್ರಿಲ್ 20 ರ ನಂತರ ಪ್ರಕಟಿಸಲಾಗುವುದು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದು ಡಿಡಿಪಿಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪರ್ಕಕ್ಕೆ ಬಂದವರು ತಿಳಿಸಿ: ಕರೊನಾ ಖಚಿತವಾಗಿರುವ ದುಬೈನಿಂದ ಮರಳಿದ ಭಟ್ಕಳ ಮೂಲದ 65 ವರ್ಷದ ವ್ಯಕ್ತಿಯ ಜತೆ ಸಂಪರ್ಕಕ್ಕೆ ಬಂದವರು ಆರೋಗ್ಯ ಸಹಾಯವಾಣಿ 104 ಕ್ಕೆ ಮಾಹಿತಿ ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಮಾರ್ಚ್ 18 ರ ಮುಂಬೈನ ಛತ್ರಪತಿ ಶಿವಾಜಿ ಟರ್ವಿುನಲ್ಸ್-ಮಂಗಳೂರು ಜಂಕ್ಷನ್ ಎಸ್3 ಕೋಚ್​ನಲ್ಲಿ ಓಡಾಡಿದವರು. ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಅಲ್ಲದೆ, ವ್ಯಕ್ತಿ ಮಾ.20 ರಂದು ನವಾಯತ್ ಕಾಲನಿಯ ಮಿಲಿಯಾ ಮಸ್ಜಿದ್​ನಲ್ಲಿ ಪ್ರಾರ್ಥನೆಗೆ ತೆರಳಿದ್ದರು ಎನ್ನಲಾಗಿದೆ.

ಆನ್​ಲೈನ್ ಮೂಲಕ ಕರೆಂಟ್ ಬಿಲ್ ಕಟ್ಟಿ: ಕರೊನಾ ಭೀತಿಯ ಹಿನ್ನೆಲೆಯಲ್ಲಿ ಆನ್​ಲೈನ್ ಮೂಲಕ ಬಿಲ್ ಪಾವತಿ ಮಾಡುವಂತೆ ಹೆಸ್ಕಾಂ ವಿನಂತಿಸಿದೆ. ವಿದ್ಯುತ್ ಗ್ರಾಹಕರಲ್ಲಿ ಏನಾದರೂ ಕುಂದು ಕೊರತೆಗಳಿದ್ದರೆ ಸಹಾಯವಾಣಿ 1992ಗೆ ಕರೆಮಾಡಿ ಮಾಹಿತಿ ಪಡೆಯಬಹುದಾಗಿದ್ದು, ಸಾರ್ವಜನಿಕರು ಹೆಸ್ಕಾಂ ಕಚೇರಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ ಎಂದು ಅಧೀಕ್ಷಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net