

ಹನಗೋಡು: ಜಮೀನಿನಲ್ಲಿ ಮೇಯುತ್ತಿದ್ದ ಮೇಕೆಗಳ ಮೇಲೆ ಶುಕ್ರವಾರ ಹಾಡಹಗಲೇ ಹುಲಿ ದಾಳಿ ಮಾಡಿ 9 ಮೇಕೆಗಳನ್ನು ಬಲಿ ಪಡೆದಿದೆ.
ಹನಗೋಡು ಗ್ರಾಮದ ದೊಡ್ಡಕಟ್ಟೆ ಬಡಾವಣೆಯ ರೈತ ಯೋಗರಾಜ್, ತಮ್ಮಯ್ಯ ಹಾಗೂ ಸಿದ್ದಪ್ಪಗೆ ಸೇರಿದ ಮೇಕೆಗಳು ಹುಲಿ ದಾಳಿಗೆ ಬಲಿಯಾಗಿವೆ. ಎಂದಿನಂತೆ ಮೇಕೆಗಳನ್ನು ಶುಕ್ರವಾರ ಹನಗೋಡಿನ ಸ್ಯಾನ್ ಸಿಟಿ ಬಡಾವಣೆಯ ಪಕ್ಕದಲ್ಲಿರುವ ಜಮೀನಿನಲ್ಲಿ ಮೇಯಿಸುತ್ತಿದ್ದ ವೇಳೆ ಜೋಳದ ಹೊಲದಲ್ಲಿ ಅಡಗಿದ್ದ ಹುಲಿ ದಿಢೀರ್ ದಾಳಿ ಮಾಡಿ 9 ಮೇಕೆಗಳನ್ನು ಕೊಂದು ಹಾಕಿದೆ.
ಹುಲಿ ಕಂಡು ಹೆದರಿದ ಕುರಿಗಾಹಿಗಳು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇಂದೇ ಹುಲಿ ಸೆರೆ ಹಿಡಿಯುವಂತೆ ಪಟ್ಟು ಹಿಡಿದರು. ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ಅರಣ್ಯ ಇಲಾಖೆ ಅಧಿಕಾರಿಗಳು ಸಾಕಾನೆಗಳನ್ನು ತಂದು ಕೂಂಬಿಂಗ್ ನಡೆಸಿ, ಹುಲಿ ಸೆರೆಗೆ ಬೋನು ಇಟ್ಟಿದ್ದಾರೆ.
ಹಲವು ದಿನಗಳಿಂದ ಈ ಭಾಗದಲ್ಲಿ ಹುಲಿ ದಾಳಿ ನಡೆಸುತ್ತಿದೆ. ರೈತರು ತಮ್ಮ ಜಮೀನುಗಳಿಗೆ ತೆರಳಿ ವ್ಯವಸಾಯ ಮಾಡಲು ಭಯಪಡುತ್ತಿದ್ದಾರೆ. ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಹುಲಿ ದಾಳಿಯಿಂದ ಬಲಿಯಾಗಿರುವ ಮೇಕೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಹನಗೋಡು ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಒತ್ತಾಯಿಸಿದ್ದಾರೆ.