ವಿರಾಜಪೇಟೆ: ದ.ಕೊಡಗು ಜಿಲ್ಲೆಯ ದೈವಜ್ಞ ಸಮಾಜದ ವತಿಯಿಂದ ನಿರ್ಮಿಸಲಾಗಿರುವ ನೂತನ ಕಟ್ಟಡ ಮತ್ತು ಸಭಾಂಗಣ ಉದ್ಘಾಟನೆ ಸಮಾರಂಭವನ್ನು ಜೂನ್ 8ರಂದು ಏರ್ಪಡಿಸಲಾಗಿದೆ ಎಂದು ದೈವಜ್ಞ ಸಮಾಜದ ಪದಾಧಿಕಾರಿಗಳು ತಿಳಿಸಿದರು.
ವಿರಾಜಪೇಟೆ ನಗರದ ನಿಸರ್ಗ ಬಡಾವಣೆಯಲ್ಲಿ ದೈವಜ್ಞ ಸಮಾಜದ ನೂತನ ಕಟ್ಟಡ ಮತ್ತು ಸಭಾಂಗಣವನ್ನು ನಿರ್ಮಿಸಲಾಗಿದ್ದು, ಜೂ.8ರಂದು ದೇವತಾ ಕಾರ್ಯಗಳೊಂದಿಗೆ ಶ್ರೀಕ್ಷೇತ್ರ ಕರ್ಕಿ, ಶ್ರೀಜ್ಞಾನೇಶ್ವರಿ ಪೀಠ ದೈವಜ್ಞ ಬ್ರಾಹ್ಮಣ ಮಠ, ದ ಪೀಠಾಧಿಪತಿಗಳಾದ ಶ್ರೀಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಲೋಕಾರ್ಪಣೆಗೊಳ್ಳಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದ.ಕೊಡಗು ದೈವಜ್ಞ ಸಮಾಜದ ಆಡಳಿತ ಮಂಡಳಿ ಅಧ್ಯಕ್ಷ ಉಲ್ಲಾಸ್ ಸಿ.ಶೇಟ್ ತಿಳಿಸಿದರು.
ಸಮಾರಂಭದ ಹಿನ್ನೆಲೆಯಲ್ಲಿ 7ರಂದು ಬೆಳಗ್ಗೆ ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ವಾಸ್ತು ಹೋಮ, ಬ್ರಹ್ಮಾದಿ ಮಂಡಲ ಹೋಮ ಹಾಗೂ ನವಗ್ರಹ ಹೋಮ ನಡೆಯಲಿದೆ. ಜೂ.8ರಂದು ಬೆಳಗ್ಗೆ 9ಗಂಟೆಗೆ ಶ್ರೀಗಳ ಪುರ ಪ್ರವೇಶ ಮತ್ತು ಪೂರ್ಣ ಕುಂಭ ಸ್ವಾಗತದೊಂದಿಗೆ ಶ್ರೀಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿಯನ್ನು ಬರಮಾಡಿಕೊಳ್ಳುವುದು. ಬೆಳಗ್ಗೆ 10.40ಕ್ಕೆ ಸಮಾಜದ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ 3ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಜೆ 6ರಿಂದ ಕರೋಕೆ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ದೈವಜ್ಞ ಸಮಾಜದ ಕಾರ್ಯದರ್ಶಿ ಬಿ.ಎಸ್.ಬಾಲಕೃಷ್ಣ ಮಾತನಾಡಿ, ಸಮುದಾಯದ ಬಾಂಧವರು ಹಾಗೂ ದಾನಿಗಳ ನೆರವಿನಿಂದ ಸುಮಾರು 85 ಲಕ್ಷ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ದ.ಕೊಡಗು ಅಧ್ಯಕ್ಷ ಉಲ್ಲಾಸ್ ಸಿ.ಶೇಟ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ರಾಜ್ಯ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಪುರಸಭೆ ಸದಸ್ಯರಾದ ಅನಿತಾ ಕುಮಾರ್, ಅಖಿಲ ಕರ್ನಾಟಕ ದೈವಜ್ಞ ಸಮಾಜದ ಅಧ್ಯಕ್ಷ ರವಿ ಎಸ್.ಗಾಂವ್ಕರ್ ಧಾರವಾಡ, ಅಖಿಲ ಕರ್ನಾಟಕ ದೈವಜ್ಞ ಮಹಿಳಾ ಸಮಾಜದ ಅಧ್ಯಕ್ಷ ವಿನಯ ರಾಯ್ಕರ್ ಶಿವಮೊಗ್ಗ ಮತ್ತಿತರ ಪ್ರಮುಖರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ದೈವಜ್ಞ ಸಮಾಜದ ಕೋಶಾಧಿಕಾರಿ ರಾಜೇಶ್ ಆರ್.ಶೇಟ್ ಮಾತನಾಡಿ, ಎರಡು ದಿನಗಳು ನಡೆಯುವ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲ ಬಾಂಧವರು ಹಾಜರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದರು.