

ರಾಮನಗರ: ಲೋಕಾಯುಕ್ತ ಕಚೇರಿಯಿಂದ ರಾಮನಗರ ಜಿಲ್ಲೆಯಲ್ಲಿ ಕೈಗೊಂಡ ಸಾರ್ವಜನಿಕರ ಕುಂದುಕೊರತೆಗಳ ಹಾಗೂ ದೂರುಗಳ ವಿಚಾರಣೆ ಅತ್ಯಂತ ಯಶಸ್ವಿಯಾಗಿದ್ದು, ಅವುಗಳಲ್ಲಿ ಸ್ಥಳದಲ್ಲಿಯೇ 81 ಪ್ರಕರಣಗಳು ತೀರ್ಮಾನವಾಗಿವೆ ಎಂದು ರಾಜ್ಯದ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣಿಂದ್ರ ಅವರು ತಿಳಿಸಿದರು.
ಮಂಗಳವಾರ ನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತರಿಂದ ಕುಂದುಕೊರತೆಗಳ, ದೂರುಗಳ ವಿಚಾರಣೆ ಹಾಗೂ ಪ್ರಕರಣ ವಿಲೇವಾರಿ ವಿಚಾರವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹಾಗೂ ದೂರುದಾರರು ಮತ್ತು ಎದುರುದಾರರ ವಿಚಾರಣೆಯ ಸಮಾರೋಪದಲ್ಲಿ ತಿಳಿಸಿದರು.
ಲೋಕಾಯುಕ್ತ ಸಂಸ್ಥೆಯಿAದ ರಾಮನಗರ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಸಾರ್ವಜನಿಕರ ಕುಂದುಕೊರತೆಗಳ, ದೂರುಗಳ ವಿಚಾರಣೆ ಹಾಗೂ ಪ್ರಕರಣ ವಿಲೇವಾರಿ ವಿಚಾರವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹಾಗೂ ದೂರುದಾರರು ಮತ್ತು ಎದುರುದಾರರ ವಿಚಾರಣೆಯನ್ನು ಕೈಗೊಳ್ಳಲು ಸುಮಾರು 170 ಪ್ರಕರಣಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು, ಅವುಗಳಲ್ಲಿ ಶೇ.70ರಷ್ಟು ಪ್ರಕರಣಗಳು ವಿಲೇವಾರಿಯಾಗಿವೆ ಹಾಗೂ ಸ್ಥಳದಲ್ಲಿಯೇ 81 ಪ್ರಕರಣಗಳು ಸ್ಥಳದಲ್ಲಿಯೇ ತೀರ್ಮಾನ ಆಗಿವೆ, ಈ ಕಾರ್ಯಕ್ರಮದ ಯಶಸ್ವಿಗೆ ಜಿಲ್ಲಾಡಳಿತ ಉತ್ತಮ ಸಹಕಾರ ನೀಡಿದೆ ಎಂದು ಹೇಳಿದರು.
ಸಾರ್ವಜನಿಕ ಅಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಸಾರ್ವಜನಿರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಬೇಕು, ಸ್ಪಂದಿಸದೇ ಕಾರ್ಯದಲ್ಲಿ ವಿಳಂಬ ನೀತಿ ಅನುಸರಿಸಿ, ಲೋಕಾಯುಕ್ತಕ್ಕೆ ದೂರು ನೀಡಿದ ನಂತರವೇ ಕಾರ್ಯಪ್ರವೃತ್ತವಾಗುವ ಉದಾಸೀನ ಮನೋಭಾವವನ್ನು ಬಿಡಬೇಕು, ಲೋಕಾಯಕ್ತರಿಗೆ ಯಾರೇ ದೂರು ನೀಡಿದರೂ ಅದಕ್ಕೆ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುತ್ತದೆ, ಕೆಲಸ ಮಾಡದೇ ಇರುವುದು, ವಿಳಂಬ ಮಾಡುವುದು ಕರ್ತವ್ಯ ಲೋಪ, ಸರ್ಕಾರಿ ಕಚೇರಿಗೆ ಯಾವುದೇ ಅರ್ಜಿ ಸಲ್ಲಿಕೆಯಾದಲ್ಲಿ ಅದನ್ನ ಪರಿಗಣಿಸಿ ಅಥವಾ ವಜಾ ಆದರೂ ಮಾಡಿ, ಆದರೆ ಅದನ್ನ ಹಾಗೇ ಇರಿಸಿಕೊಂಡು ಕಾಲಕಳೆಯಬಾರದು, ಅಧಿಕಾರಿಗಳು ಮೊದಲು ಲೋಕಾಯುಕ್ತ ಕಾಯ್ದೆಯನ್ನು ಓದಿಕೊಳ್ಳಬೇಕು ಎಂದು ಸಲಹೆ ನೀಡಿದ ನ್ಯಾಯಮೂರ್ತಿಗಳು, ಅದರಲ್ಲಿ ಕರ್ತವ್ಯ ಲೋಪ, ದುರಾಡಳಿತವನ್ನು ಹೇಗೆ ವ್ಯಾಖ್ಯಾನಿಸಲಾಗಿದೆ ಎಂದು ತಿಳಿದುಬರುತ್ತದೆ, ಶೇ.1ರಷ್ಟಿರುವ ಸರ್ಕಾರಿ ನೌಕರರೇ ರಾಜ್ಯದ ಜನರ ಜೀವನವನ್ನು ಉತ್ತಮಗೊಳಿಸಲು ಶ್ರಮೀಸಬೇಕೆಂದರು.
ಇಲ್ಲಿ ಸಮಸ್ಯೆ, ಅಹವಾಲು ಇತ್ಯರ್ಥಕ್ಕೆ ಬಂದ ದೂರುದಾರರು, ಎದುರುದಾರರಿಗೆ ಕಾನೂನಿನ ತಿಳುವಳಿಕೆ ಮೂಡಿಸಿ, ಯಾರಿಗೂ ಅಸಮಧಾನವಾಗುವಂತಹ ತೀರ್ಮಾನ ಕೈಗೊಂಡಿಲ್ಲ, ಎಲ್ಲರೂ ಸಮಾಧಾನ ತರುವ ತೀರ್ಪನ್ನು ನೀಡಲಾಗಿದೆ, ಸಾಕಷ್ಟು ಪ್ರಕರಣಗಳ ಕುರಿತು ನೋಟೀಸ್ ನೀಡಿದಾಗ ಅಧಿಕಾರಿಗಳು ಸಮಸ್ಯೆಗಳನ್ನು ಪರಿಹಾರ ಮಾಡಿರುವುದು ಕಂಡುಬAದಿದೆ ಎಂದು ಹೇಳಿದರು.
ಸಿವಿಲ್ ನ್ಯಾಯಾಧೀಶರು ಹಾಗೂ ಉಪ ಲೋಕಾಯುಕ್ತದ ಸಹ ಕಾರ್ಯದರ್ಶಿ ಕಿರಣ್ ಪಾಟೀಲ್, ಜಿಲ್ಲಾಧಿಕಾರಿಗಳಾದ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಲೋಕಾಯುಕ್ತ ಎಸ್ಪಿ ಸ್ನೇಹ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತಾ, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಅಪರ ಪೊಲೀಸ್ ವರಿಷ್ಠಾಧಿಕಾರಿ ಟಿ.ವಿ.ಸುರೇಶ್ ವೇದಿಕೆಯಲ್ಲಿದ್ದರು.
ದೂರವಾಣಿ ಮೂಲಕವೂ ವಿಚಾರಣೆ: ರಾಜ್ಯದ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣಿಂದ್ರ ಅವರು ಅವರು ಮಾ.10 ಹಾಗೂ 11ರ ನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕುಂದುಕೊರತೆಗಳ, ದೂರುಗಳ ವಿಚಾರಣೆ ಸಂದರ್ಭದಲ್ಲಿ ಪ್ರಕರಣದ ವಿಚಾರಣೆಗೆ ಗೈರು ಹಾಜರಾಗಿದ್ದ ಅಹವಾಲು ಸಲ್ಲಿಸಿದವರನ್ನು ಮೊಬೈಲ್ ನಲ್ಲಿಯೇ ಸಂಪರ್ಕಿಸಿ ವಿಚಾರಣೆ ನಡೆಸಿ, ತೀರ್ಪು ಪ್ರಕಟಿಸಿದರು.