800 ಪೊಲೀಸರಿಂದ 'ಕಾಂತಾರ' ವೀಕ್ಷಣೆ; ಸಂಜೆಯ ಪ್ರದರ್ಶನಕ್ಕೆ ಮುಂಗಡ ಬುಕಿಂಗ್..

1374305
Published on

ದಾವಣಗೆರೆ: ರಾಜಕೀಯ ಕಾರ್ಯಕ್ರಮ, ಜನಪ್ರತಿನಿಧಿಗಳ ಭೇಟಿ, ಹಬ್ಬದ ಸಂಭ್ರಮ, ಮೆರವಣಿಗೆ.. ಹೀಗೆ ವರ್ಷವಿಡೀ ಕಾನೂನು ಸುವ್ಯವಸ್ಥೆಗಾಗಿ ಒಂದಲ್ಲ ಒಂದು ರೀತಿಯ ಬಂದೋಬಸ್ತ್‌ನಲ್ಲಿ ಬಿಜಿಯಾಗಿರುವ ಪೊಲೀಸರಿಗೆ ಮನರಂಜನೆಗೆ ಬಿಡುವು ಸಿಗುವುದೇ ಕಷ್ಟ. ಅಂಥದ್ದರ ನಡುವೆ ಆರಕ್ಷಕರು ದಾವಣಗೆರೆಯಲ್ಲಿ ಸಾಮೂಹಿಕವಾಗಿ ಚಿತ್ರ ವೀಕ್ಷಣೆ ಮಾಡಿದ್ದಾರೆ.

ಇಲ್ಲಿನ ಗೀತಾಂಜಲಿ ಚಿತ್ರಮಂದಿರದಲ್ಲಿ ಶುಕ್ರವಾರ ಸಂಜೆ ಪ್ರದರ್ಶನ ಅವರಿಗಾಗಿಯೇ ಮುಂಗಡ ಬುಕಿಂಗ್ ಆಗಿತ್ತು. ಶುಕ್ರವಾರ ಹೇಳಿಕೇಳಿ ಪೊಲೀಸ್ ಹುತಾತ್ಮರ ದಿನ. ಸಿವಿಲ್ ಡ್ರೆಸ್‌ನಲ್ಲಿದ್ದ ಹಿರಿಯ ಅಧಿಕಾರಿ- ಸಿಬ್ಬಂದಿ ಹಾಗೂ ಕೆಲವೇ ಸಂಖ್ಯೆಯ ಕುಟುಂಬ ಸದಸ್ಯರು ಒಟ್ಟಿಗೆ ಕೂತು ರಿಷಬ್‌ ಶೆಟ್ಟಿ ನಟಿಸಿರುವ ಕಾಂತಾರ ಚಿತ್ರ ವೀಕ್ಷಿಸಿದರು.

ದಾವಣಗೆರೆ ಜಿಲ್ಲೆ ಮಟ್ಟಿಗಿದು ಚೊಚ್ಚಲ ಪ್ರಯತ್ನ. ಹಿರಿಯ ಅಧಿಕಾರಿಗಳು ಹಣ ಹಾಕಿ ಇಡೀ ಚಿತ್ರಮಂದಿರದ ಎಲ್ಲ ಟಿಕೆಟ್ ಖರೀದಿಸಿದ್ದರು. ಸುಮಾರು 800 ಮಂದಿ ಚಿತ್ರ ವೀಕ್ಷಿಸಿ ಸಂಭ್ರಮಿಸಿದರು. ಸದಾ ಒತ್ತಡದ ಮೂಡಲ್ಲಿರುತ್ತಿದ್ದ ಪೊಲೀಸರು ಈ ಉಚಿತ ಪ್ರದರ್ಶನದಿಂದಾಗಿ ಕೊಂಚ ರಿಲ್ಯಾಕ್ಸ್ ಆದರು. ದೀಪಾವಳಿ ಹಬ್ಬದ ಮುನ್ನವೇ ಸಂಭ್ರಮಿಸಿದರು.

ಸದಾ ಬಂದೋಬಸ್ತ್‌ನಲ್ಲಿ ಮುಳುಗಿದ್ದ ನಗರ ಮಟ್ಟದ ಅಧಿಕಾರಿಗಳೇ ಸೇರಿ ಸಿನಿಮಾ ವೀಕ್ಷಿಸುವ ಆಲೋಚನೆ ಮಾಡಿದರು. ಇದರಿಂದ ಆಸಕ್ತ ಸಿಬ್ಬಂದಿ ಉಚಿತ ಪ್ರದರ್ಶನದ ಅವಕಾಶ ಪಡೆದರು. ಸ್ವಲ್ಪ ಬ್ರೇಕ್ ಸಿಕ್ಕಿದ್ದಕ್ಕೆ ಖುಷಿಪಟ್ಟರು. | ಸಿ.ಬಿ.ರಿಷ್ಯಂತ್, ಜಿಲ್ಲಾ ಪೊಲೀಸ್ ಅಧೀಕ್ಷಕ

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ವಿಶೇಷ ಅತಿಥಿಯಾಗಿದ್ದರೆ, ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್, ಎಡಿಸಿ ರಾಮಗೊಂಡ ಬಿ. ಬಸರಗಿ, ನಗರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಸೇರಿ ದಾವಣಗೆರೆ ನಗರದಲ್ಲಿ ವಾಸವಿದ್ದ ಎಲ್ಲ ಹಿರಿಯ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net