

ಸೋಮವಾರಪೇಟೆ: ಹಲವು ಕಾರಣಗಳಿಂದ ಬಾಕಿ ಉಳಿದಿದ್ದ ಬಡವರ ಮನೆಗಳ 94ಸಿ ಅರ್ಜಿಗಳನ್ನು ಮರು ಪರಿಶೀಲಿಸಿ 80 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.
ಕಂದಾಯ ಇಲಾಖೆಯ ವತಿಯಿಂದ ಶಾಸಕರ ಕಚೇರಿ ಎದುರು ಬುಧವಾರ ಏರ್ಪಡಿಸಿದ್ದ ಹಕ್ಕಪತ್ರ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ತಿರಸ್ಕೃತಗೊಂಡಿರುವ ಹಕ್ಕುಪತ್ರ ಅರ್ಜಿಗಳ ಮರು ಪರಿಶೀಲನೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಬಾಕಿಯಿರುವ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದು ಭರವಸೆ ನೀಡಿದರು.
ಕಂದಾಯ ಇಲಾಖೆಗೆ ಸಲ್ಲಿಕೆಯಾಗಿರುವ, ಸದ್ಯದ ನಿಯಮದಂತೆ ಹಕ್ಕುಪತ್ರಗಳನ್ನು ನೀಡಲು ಸಾಧ್ಯವಾಗದ ಯಾವುದೇ ಅರ್ಜಿಗಳನ್ನು ತಹಸೀಲ್ದಾರ್ ಅವರು ವಜಾ ಮಾಡಬಾರದು. ಪೂರಕವಾದ ನಿಯಮಗಳನ್ನು ಸರ್ಕಾರ ತಂದಾಗ ಕಾನೂನಿನ ಚೌಕಟ್ಟಿನಲ್ಲಿ ಉಳಿಕೆ ಅರ್ಜಿಗಳನ್ನು ವಿಲೇವಾರಿ ಮಾಡಬಹುದು ಎಂದು ಹೇಳಿದರು.
ಈ ಹಿಂದೆ ಕಂದಾಯ ಇಲಾಖೆ ಮಾಡಿದ ತಪ್ಪುಗಳಿಂದ ಈಗ ಬಡವರು ಹಕ್ಕಪತ್ರಗಳಿಂದ ವಂಚಿತರಾಗಬೇಕಾದ ಸಂಕಷ್ಟ ಬಂದಿದೆ. ಪ್ರಸಕ್ತ ಕಂದಾಯ ಅಧಿಕಾರಿಗಳು ಪ್ರತಿ ಗ್ರಾಮಗಳಿಗೆ ವಾಹನಗಳಲ್ಲಿ ತೆರಳುವ ಸೌಲಭ್ಯವಿದೆ. ಉನ್ನತ ದರ್ಜೆಯ ತಾಂತ್ರಿಕತೆಯಿದೆ. ಕಂದಾಯ ಇಲಾಖೆಗೆ ಸೇರಬೇಕಾದ ಜಾಗವನ್ನು ಇನ್ನಾದರೂ ಕಾಪಾಡಿಕೊಳ್ಳಬೇಕು. ಬಡವರಿಗೆ ಹಕ್ಕುಪತ್ರ ನೀಡುವ ಎಲ್ಲ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಹಕ್ಕುಪತ್ರ ನೀಡಬೇಕು ಎಂದು ಹೇಳಿದರು.
ವಡಯನಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿರುವ ಜಾಗದ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮುಂದುವರಿದಿದೆ. ಬಡವರಿಗೆ ಹಕ್ಕುಪತ್ರ ಕೊಡಿಸುವ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡಲಾಗುತ್ತಿದೆ ಎಂದು ಹೇಳಿದರು.
ಸೋಮವಾರ ಸಂತೆ ದಿನ ತಾಲೂಕು ಕಚೇರಿಯಲ್ಲಿ ಎಲ್ಲ ಅಧಿಕಾರಿಗಳು ಸಾರ್ವಜನಿಕರಿಗೆ ಸಿಗಬೇಕು. ಫೀಲ್ಡ್‌ಗೆ ಹೋಗಿದ್ದಾರೆ ಎಂಬ ಉತ್ತರವನ್ನು ಇನ್ನು ಮುಂದೆ ಕೊಡಬಾರದು. ಈ ಬಗ್ಗೆ ತಹಸೀಲ್ದಾರ್ ಅವರು ಸಿಬ್ಬಂದಿಗೆ ಸೂಚನೆ ನೀಡಬೇಕು ಎಂದು ಹೇಳಿದರು.
ತಹಸೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ, 2014 ಮತ್ತು 2022ರಲ್ಲಿ ಹಕ್ಕುಪತ್ರಕ್ಕಾಗಿ ಅಕ್ರಮ-ಸಕ್ರಮ ಸಮಿತಿಗೆ ಸಲ್ಲಿಕೆಯಾಗಿರುವ 10 ಸಾವಿರ ಅರ್ಜಿಗಳಲ್ಲಿ, ಈಗಾಗಲೇ 4200 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ. ಕಾನೂನಿನ ಪರಿಮಿತಿಯಲ್ಲಿ ಇರದ ಉಳಿಕೆ ಅರ್ಜಿಗಳನ್ನು ತಿರಸ್ಕಾರ ಮಾಡಿಲ್ಲ. ಶಾಸಕರ ಸಲಹೆಯಂತೆ ಪ್ರತಿಹಂತದಲ್ಲೂ ಮರು ಪರಿಶೀಲನೆ ಮಾಡಲಾಗುತ್ತಿದೆ. ಸಾಧ್ಯವಾದಷ್ಟು ಅರ್ಜಿಗಳಿಗೆ ಕಂದಾಯ ಇಲಾಖೆಯಿಂದ ಹಕ್ಕುಪತ್ರಗಳನ್ನು ನೀಡಲಾಗುವುದು ಎಂದು ಹೇಳಿದರು.
ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ಬಿ.ಬಿ.ಸತೀಶ್, ಜನಾರ್ದನ್, ಚಂದ್ರಿಕಾ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕಾಂತರಾಜು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ಇಒ ಪರಮೇಶ ಕುಮಾರ್ ಇದ್ದರು.