80 ಕೋಟಿ ರೂ.ವೆಚ್ಚದಲ್ಲಿ ಸಂತೆ ಮೈದಾನ ಅಭಿವೃದ್ಧಿ

7-pnp 4
Published on

ಪಾಂಡವಪುರ: ಪಾಂಡವಪುರ ಪುರಸಭೆ ವ್ಯಾಪ್ತಿಯ ಗಡಿ ವಿಸ್ತಾರಗೊಂಡಿದ್ದು ಅದಕ್ಕೆ ತಕ್ಕಂತೆ ಪಟ್ಟಣದ ಅಭಿವೃದ್ಧಿಯ ನೀಲಿನಕ್ಷೆ ತಯಾರಿಸಿ ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ರೈತ ಸಂಘ ಟೌನ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಯುಜಿಡಿ ಕಾಮಗಾರಿಗೆ ಅಗತ್ಯವಾಗಿದ್ದ 11.62 ಕೋಟಿ ರೂ.ಅನುದಾನವನ್ನು ಸರ್ಕಾರ ಮಂಜೂರು ಮಾಡಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು. ಪಟ್ಟಣದ ಹೃದಯ ಭಾಗದಲ್ಲಿರುವ ಸಂತೆ ಮೈದಾನವನ್ನು 80 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ರೈತರು ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಯೋಜನೆ ತಯಾರಿಸಲಾಗಿದೆ. ಈ ಯೋಜನೆಗೆ ಸರ್ಕಾರ ಅನುದಾನ ನೀಡಲಿದೆ. ಅಂತೆಯೇ ವಿಶ್ವೇಶ್ವರಯ್ಯನಗರ ಅಥವಾ ತಾಲೂಕಿನ ಹಿರೇಮರಳಿ ಗೇಟ್ ಸಮೀಪ ರಂಗಮಂದಿರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಪಟ್ಟಣದ ಹೇಮವತಿ ಬಡಾವಣೆಯ ಹಿಂಬದಿಯ 15 ಎಕರೆ ಜಮೀನಿನಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೂ ಅಗತ್ಯ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಪುರಸಭೆ ಪೌರಕಾರ್ಮಿಕರಿಗೆ ನಿವೇಶನ ವಿತರಿಸುವ ವಿಚಾರದಲ್ಲಿ ಕೆಲ ಗೊಂದಲಗಳಿದ್ದು, ಪುರಸಭೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಿಗೂ ನಿವೇಶನ ಸಿಗಬೇಕು. ಸದ್ಯದ ಯೋಜನೆಯಿಂದ ಕೆಲವರಿಗಷ್ಟೇ ಲಾಭವಾಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿರುವ ಕಾರಣ ನಿವೇಶನ ಹಂಚಿಕೆ ಮಾಡಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಅದೇ ರೀತಿ ಹಾರೋಹಳ್ಳಿ ಹೊಸ ಬಡಾವಣೆಯ ರಸ್ತೆ ನಿರ್ಮಾಣಕ್ಕೆ ಶೀಘ್ರ ಭೂಮಿಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.

ಸ್ವರಾಜ್ ಉತ್ಸವ ಯಶಸ್ವಿಯಾಗಬೇಕು:

ಮಹಿಳೆಯರು, ಯುವಕರ ಆರ್ಥಿಕ ಸಬಲೀಕರಣ ಮತ್ತು ಸ್ವಾವಲಂಬನೆ ಬದುಕಿಗಾಗಿ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಸೆ.13ರಿಂದ ಮೂರು ದಿನಗಳ ಕಾಲ ಸ್ವರಾಜ್ ಉತ್ಸವ ಕಾರ್ಯಕ್ರಮವನ್ನು ಪುಟ್ಟಣ್ಣಯ್ಯ ಫೌಂಡೇಷನ್ ಮತ್ತು ವಿವಿಧ ಉದ್ಯಮಗಳ ಸಂಸ್ಥೆ ವತಿಯಿಂದ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 30ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳು ಭಾಗವಹಿಸಲಿದ್ದು, ಮಹಿಳೆಯರು ಮತ್ತು ಯುವಕರು ಹೇಗೆ ಸ್ವಾವಲಂಬಿಗಳಾಗಬೇಕು ಎಂಬ ವಿಚಾರದ ಜತೆಗೆ ಕೃಷಿ, ನೀರಾವರಿ, ವ್ಯವಸಾಯ, ಶಿಕ್ಷಣ ಸೇರಿದಂತೆ 12 ಮಹತ್ವದ ವಿಚಾರಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಿದ್ದಾರೆ. ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಆಗಮಿಸಬೇಕು ಎಂದರು.

ರಾಘವ, ಮುರಳಿ, ಲವಕುಮಾರ್, ಶ್ರೀನಿವಾಸ್, ಬೀರಶೆಟ್ಟಹಳ್ಳಿ ಮಂಜುನಾಥ್, ನಾಗೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net