80 ಸರ್ಕಾರಿ ಶಾಲೆಗಳಿಗಿಲ್ಲ ದಾಖಲೆಗಳು

02-LNG-01
ಆಸ್ತಿ ದಾಖಲೆ ಇಲ್ಲದ ಕಸಬಾ ಲಿಂಗಸುಗೂರು ಹಿರಿಯ ಪ್ರಾಥಮಿಕ ಶಾಲೆಯ ಹೊರನೋಟ.
Published on

ಲಿಂಗಸುಗೂರು: ತಾಲೂಕಿನಲ್ಲಿ 74 ಸರ್ಕಾರಿ ಪ್ರಾಥಮಿಕ ಶಾಲೆಗಳು, 6 ಸರ್ಕಾರಿ ಪ್ರೌಢ ಶಾಲೆಗಳು ದಾಖಲೆಗಳಲ್ಲಿದೆ ಕಾರ್ಯ ನಿರ್ವಹಿಸುತ್ತಿವೆ. ಇವುಗಳಿಗೆ ಇಲ್ಲಿವರೆಗೂ ವಾರಸುದಾರರನ್ನು ಗುರುತಿಸುವ ಕಾರ್ಯ ಶಿಕ್ಷಣ ಇಲಾಖೆಯಿಂದ ಸಾಧ್ಯವಾಗಿಲ್ಲ.

ಲಿಂಗಸುಗೂರು ತಾಲೂಕಿನಲ್ಲಿ 313 ಸರ್ಕಾರಿ ಪ್ರಾಥಮಿಕ ಶಾಲೆಗಳು, 49 ಸರ್ಕಾರಿ ಪ್ರೌಢಶಾಲೆಗಳು ಸೇರಿ 362 ಶಾಲೆಗಳಿವೆ. ಇವುಗಳಲ್ಲಿ 178 ಸರ್ಕಾರಿ ಪ್ರಾಥಮಿಕ ಶಾಲೆಗಳು, 30 ಸರ್ಕಾರಿ ಪ್ರೌಢ ಶಾಲೆಗಳು ಒಟ್ಟು 208 ಶಾಲೆಗಳಿಗೆ ಖಾತೆ ಇವೆ. ಇನ್ನುಳಿದ 135 ಪ್ರಾಥಮಿಕ, 19 ಪ್ರೌಢಶಾಲೆಗಳಿಗೆ ಖಾತೆಗಳಿಲ್ಲ. ಈ ಪೈಕಿ 74 ಸರ್ಕಾರಿ ಪ್ರಾಥಮಿಕ ಶಾಲೆಗಳು, 6 ಸರ್ಕಾರಿ ಪ್ರೌಢ ಶಾಲೆಗಳಿಗೆ ದಾಖಲೆಗಳು ಇಲ್ಲದಿರುವುದು ಅಚ್ಚರಿ ಮೂಡಿಸಿದೆ.

57 ಪ್ರಾಥಮಿಕ, 5 ಪ್ರೌಢ ಶಾಲೆಗಳ ಖಾತೆ ಮಾಡಿಸಲು ಗ್ರಾಪಂಗಳಿಗೆ, 5 ಪ್ರಾಥಮಿಕ, 1 ಪ್ರೌಢಶಾಲೆಗಳ ಖಾತೆ ಮಾಡಿಸಲು ಪುರಸಭೆಗಳಿಗೆ, 2 ಪ್ರಾಥಮಿಕ ಶಾಲೆಗಳನ್ನು ಖಾತೆ ಮಾಡಲು ಉಪನೊಂದಣಿ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನ್ಯಾಯಾಲಯದಲ್ಲಿ 4 ಸರ್ಕಾರಿ ಪ್ರಾಥಮಿಕ ಶಾಲೆಗಳ ಪ್ರಕರಣಗಳು ಬಾಕಿ ಉಳಿದಿವೆ.

ಆಸ್ತಿ ಸಂರಕ್ಷಣಾ ಅಭಿಯಾನ: ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಜಾಗ, ಆಸ್ತಿಯ ಕಬಳಿಕೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಆಸ್ತಿಯನ್ನು ಸಂರಕ್ಷಿಸುವ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆ ಕಳೆದ ಮೂರು ವರ್ಷಗಳಿಂದ ಆಸ್ತಿ ಸಂರಕ್ಷಣಾ ಅಭಿಯಾನ ನಡೆಸುತ್ತಿದೆ. ಅಭಿಯಾನದ ಮೂಲಕ ಶಾಲೆ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾದ ಜಾಗ ಅಥವಾ ದಾನಿಗಳು ನೀಡಿದ ಸ್ಥಳವನ್ನು ಒತ್ತುವರಿ ಮಾಡುವುದನ್ನು ತಡೆಯಲು ಖಾತೆ ಮಾಡುವ ಮೂಲಕ ಸರ್ಕಾರಿ ಆಸ್ತಿ ಸಂರಕ್ಷಿಸಲು ಇಲಾಖೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಬೇಕಿದೆ. ಹಾಗೂ ತಾಲೂಕು ಆಡಳಿತ ಕಂದಾಯ ಇಲಾಖೆ, ಪಂಚಾಯತ್‌ರಾಜ್ ಸಂಸ್ಥೆಗಳು, ಪುರಸಭೆಗಳು ಕೈಜೋಡಿಸಿ ಆಸ್ತಿ ಉಳಿಸಿಕೊಳ್ಳಲು ಪ್ರಮುಖ ಪಾತ್ರವಹಿಸುವ ಅಗತ್ಯವಿದೆ.

ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಖಾತೆ ಮಾಡಿ ಆಸ್ತಿ ಸಂರಕ್ಷಣೆ ಮಾಡಲು ಸಂಬಂಧಪಟ್ಟ ಶಾಲೆಗಳ ಮುಖ್ಯಶಿಕ್ಷಕರು, ಎಸ್‌ಡಿಎಂಸಿ ಸಮಿತಿಗೆ ಸೂಚಿಸಲಾಗಿದೆ. ಇಲಾಖೆ ಈ ಬಗ್ಗೆ ಹೆಚ್ಚು ಗಮನಹರಿಸಲು ಮುಂದಾಗುವುದು. ಹನಮಂತಪ್ಪ ಕುಳಗೇರಿ ಕ್ಷೇತ್ರ ಸಮನ್ವಯಾಧಿಕಾರಿ ಶಿಕ್ಷಣ ಇಲಾಖೆ ಲಿಂಗಸುಗೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net