

ದೇವದುರ್ಗ: ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಡಿಎಂಸಿ ರಚಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳ ಪಾಲಕರು ಗುರುವಾರ ಪಟ್ಟಣದಲ್ಲಿ ಬಿಇಒ ಮಹಾದೇವಯ್ಯಗೆ ಮನವಿ ಸಲ್ಲಿಸಿದರು.
ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಲವು ವರ್ಷಗಳಿಂದ ಎಸ್ಡಿಎಂಸಿ ರಚನೆ ಮಾಡಿಲ್ಲ. ಇದರಿಂದ ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸಲು, ವಿವಿಧ ಕೆಲಸ ಮಾಡಲು ಸಮಸ್ಯೆಯಾಗುತ್ತಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಮಸ್ಯೆ ಕೇಳವವರಿಲ್ಲದಂತಾಗಿದೆ. ಹಿಂದಿನ ಮುಖ್ಯಶಿಕ್ಷಕ ಶರಣಗೌಡಗೆ ಹಲವು ಸಲ ಮನವಿ ಮಾಡಿದರೂ ಸ್ಪಂದಿಸಲಿಲ್ಲ ಎಂದು ಆರೋಪಿಸಿದರು.
ಕೂಡಲೇ ಮಕ್ಕಳ ಶಿಕ್ಷಣ ದೃಷ್ಟಿಯಿಂದ ಹಾಗೂ ಸೌಲಭ್ಯ ಕಲ್ಪಿಸುವ ಸಲುವಾಗಿ ಎಸ್ಡಿಎಂಸಿ ರಚನೆ ಮಾಡಲು ಮುಂದಾಗಬೇಕು. ಈ ಬಗ್ಗೆ ಮುಖ್ಯಶಿಕ್ಷಕ ಮೃತ್ಯುಂಜಯಗೆ ಸೂಚನೆ ನೀಡಬೇಕು. ಶಾಲೆಗೆ ಬೇಕಾದ ಅಗತ್ಯ ಸೌಲಭ್ಯ, ಶಿಕ್ಷಕರನ್ನು ನೇಮಕ ಮಾಡಬೇಕು. ಶಾಲಾ ಮಕ್ಕಳ ಶಿಕ್ಷಣ ಕಲಿಕೆಗೆ ವಿವಿಧ ಕಾರ್ಯಕ್ರಮ ರೂಪಿಸಬೇಕು ಎಂದು ಒತ್ತಾಯಿಸಿದರು. ಪಾಲಕರಾದ ರಘುನಾಥ ಜೋಗಿ, ಜಿ.ಬಸವರಾಜ, ವಿಶ್ವನಾಥ ಜೋಗಿ, ಜಿ.ಹಮೀದ್ ನಾಯ್ಕ, ಗುಂಡಪ್ಪ, ರಂಗಪ್ಪ, ಮೌನೇಶ, ನಾಗರಾಜ ಇತರರಿದ್ದರು.