ಪೊಲೀಸರ ದಾಳಿ ವೇಳೆ ಆ ಪುರುಷರ ಕೈಯಲ್ಲಿದ್ದ ಲೇಡಿಸ್​ ಪರ್ಸ್​ನ ರಹಸ್ಯ ಬಯಲಾಯ್ತು!

diamond
Published on

ಬೆಂಗಳೂರು: ಸಿಟಿ ಮಾರ್ಕೆಟ್​ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಕೆಂಪು ಬಣ್ಣದ ಲೇಡಿಸ್​ ಪರ್ಸ್ ಹಿಡಿದು ಓಡಾಡುತ್ತಿದ್ದ ಮೂವರು ಖತರ್ನಾಕ್​ ಕಳ್ಳರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಆ ಪರ್ಸ್​ನಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ಬರೋಬ್ಬರಿ 80 ವಜ್ರದ ಹರಳು ಪತ್ತೆಯಾಗಿವೆ.

ದಕ್ಷಿಣ ಕನ್ನಡದ ಪುತ್ತೂರು ಮೂಲದ ರವಿಕುಮಾರ್​ (54), ಪ್ರವಿಣ್​ ಕುಮಾರ್​ (35), ಸುಧೀರ್​ (28) ಬಂಧಿತರು. ಈ ಮೂವರು ಆರೋಪಿಗಳು ಸೆ.1ರ ಸಂಜೆ 7.15ರಲ್ಲಿ ಚಿಕ್ಕಪೇಟೆಯಲ್ಲಿ ವಜ್ರದ ಹರಳುಗಳನ್ನು ಮಾರಾಟ ಮಾಡಲು ಬಂದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಟಿ ಮಾರ್ಕೆಟ್​ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಈ ಮೂವರ ಚಲನ-ವಲನಗಳನ್ನು ಗಮನಿಸಿ ಅನುಮಾನದ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗೊಂದಲದ ಹೇಳಿಕೆ ನೀಡಿದ್ದರು. ಇವರ ಬಳಿ ಇದ್ದ ಕೆಂಪು ಬಣ್ಣದ ಲೇಡಿಸ್​ ಪರ್ಸ್​ ಅನ್ನು ಪರಿಶೀಲಿಸಿದಾಗ, ನೀಲಿ ಬಣ್ಣದ ಪೇಪರ್​ನಲ್ಲಿ 80 ವಜ್ರದ ಹರಳುಗಳು ಇದ್ದವು. ಇದನ್ನೂ ಓದಿರಿ ಮೊಬೈಲ್​ ಕಳ್ಳನ ವಿರುದ್ಧ ಹೋರಾಡಿ ಗೆದ್ದ ಕೂಲಿಕಾರನ ಮಗಳಿಗೆ ಸಿಕ್ತು ಬಂಪರ್​ ಬಹುಮಾನ!

ಇವುಗಳನ್ನು ಹೊಂದಲು, ಸಾಗಾಣಿಕೆ ಅಥವಾ ವಿಲೇವಾರಿ ಮಾಡಲು ಬೇಕಾದ ಯಾವುದೇ ದಾಖಲಾತಿ ಆರೋಪಿಗಳ ಬಳಿ ಇರಲಿಲ್ಲ. ಈ ವಜ್ರದ ಹರಳುಗಳನ್ನು ಅಸಲಿಯೇ ಎಂದು ಪರೀಕ್ಷಿಸಲು ಆಭರಣ ತಯಾರಿಸುವ ತಜ್ಞರೊಬ್ಬರನ್ನು ಸ್ಥಳಕ್ಕೆ ಕರೆಸಿ ಪರಿಶೀಲಿಸಿದಾಗ ಕಚ್ಚಾ ಹಾಗೂ ನೈಜ ವಜ್ರದ ಹರಳುಗಳು ಎಂಬುದು ಬೆಳಕಿಗೆ ಬಂದಿದೆ. ಇದರ ಅಂದಾಜು ಮೌಲ್ಯ 40 ಲಕ್ಷ ರೂಪಾಯಿ ಎಂದು ತಜ್ಞರು ಅಂದಾಜಿಸಿದ್ದಾರೆ.

ಈ ಆರೋಪಿಗಳು ಲಕ್ಷಾಂತರ ರೂ. ಬೆಲೆ ಬಾಳುವ ವಜ್ರದ ಹರಳುಗಳನ್ನು ಬೇರೆ ಕಡೆಗಳಲ್ಲಿ ಕಳ್ಳತನ ಮಾಡಿ ಅಂಚೆಪೇಟೆಯಲ್ಲಿರುವ ಚಿನ್ನದ ಆಭರಣ ತಯಾರಿಸುವ ಅಂಗಡಿಗಳಿಗೆ ಮಾರಾಟ ಮಾಡಲು ಬಂದಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಸಿಟಿ ಮಾರ್ಕೆಟ್​ ಠಾಣೆ ಇನ್​ಸ್ಪೆಕ್ಟರ್​ ಕುಮಾರಸ್ವಾಮಿ ನೇತೃತ್ವದ ತಂಡ ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ. ಪ್ರಕರಣದ ಹಿಂದೆ ಕಾಣದ ಪ್ರಭಾವಿಗಳು ಇರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net