

ಶಿರಸಿ: ಸರ್ಕಾರದ ಪರಿಹಾರ ಧನ ಸಿಗದ ನೋಂದಾಯಿತ ಕಾರ್ವಿುಕರ ಖಾತೆಗಳಿಗೆ 8 ದಿನಗಳೊಳಗೆ ಮೊತ್ತ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.
ಕಾರ್ವಿುಕರ ಸಮಸ್ಯೆ ಕುರಿತು ಕಾರ್ವಿುಕ ಇಲಾಖೆ, ಪೊಲೀಸ್ ಇಲಾಖೆ ಸಮಕ್ಷಮ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಶನಿವಾರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು.
ಈ ವೇಳೆ ವಿಷಯ ಪ್ರಸ್ತಾಪಿಸಿದ ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ, ಕರೊನಾ ವೈರಸ್ ಕಾರಣದಿಂದ ಕಾರ್ವಿುಕರು ಕಷ್ಟದ ದಿನ ಅನುಭವಿಸುತ್ತಿದ್ದಾರೆ. ಕೆಲಸವಿಲ್ಲದೇ ಕಂಗಾಲಾಗಿದ್ದಾರೆ. ಇಂಥ ಸಂದರ್ಭದಲ್ಲಿ ಸರ್ಕಾರವು ಪ್ರತಿ ನೋಂದಾಯಿತ ಕಾರ್ವಿುಕನ ಖಾತೆಗೆ 5 ಸಾವಿರ ರೂ. ನೀಡುವಂತೆ ಆದೇಶಿಸಿತ್ತು. ಆದರೆ, ಈವರೆಗೆ ಜಿಲ್ಲೆಯಲ್ಲಿ 20 ಸಾವಿರ ಕಾರ್ವಿುಕರ ಖಾತೆಗೆ ಇನ್ನೂ ಪರಿಹಾರಧನ ಬಂದಿಲ್ಲ. ಕಾರ್ವಿುಕ ಖಾತೆ ಸಚಿವರು ಸೂಚಿಸಿ ತಿಂಗಳು ಕಳೆದರೂ ಇಲಾಖೆ ಅಧಿಕಾರಿಗಳು ಗಮನ ನೀಡುತ್ತಿಲ್ಲ ಎಂದು ದೂರಿದರು. ಇಲಾಖೆ ಅಧಿಕಾರಿಗಳು ಜನಪರವಾಗಿ ಕಾರ್ಯ ಮಾಡದ ಕಾರಣ ಕಾರ್ವಿುಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಕ್ಷಣ ಈ ಬಗ್ಗೆ ಕ್ರಮವಹಿಸಬೇಕು ಎಂದು ಎಚ್ಚರಿಸಿದರು.
ಕಾರ್ವಿುಕ ಇಲಾಖೆಯ ಆಹಾರ ಕಿಟ್ ಅನ್ನು ನೋಂದಾಯಿತ ಕಾರ್ವಿುಕರಲ್ಲದೇ ಬೇಕಾಬಿಟ್ಟಿ ವಿತರಿಸಲಾಗುತ್ತಿದೆ. ಇದು ಖಂಡನೀಯ. ಹೀಗಾಗಿ ಮೇ 27ರಂದು ಪ್ರತಿಭಟಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಯಾವ ಕಾರ್ವಿುಕರ ಖಾತೆಗೆ ಆಧಾರ್ ನಂಬರ್ ಜೋಡಿಸಲಾಗಿದೆ ಅಂಥ ಖಾತೆಗೆ ಸರ್ಕಾರದ ಸಹಾಯಧನ ತ್ವರಿತವಾಗಿ ಸಿಗಲಿದೆ. ತಕ್ಷಣ ಕಾರ್ವಿುಕ ಇಲಾಖೆ ಅಧಿಕಾರಿಗಳು, ಬ್ಯಾಂಕ್ ಪ್ರಮುಖರ ಜತೆ ಸಭೆ ನಡೆಸಿ, ಈ ವಿಷಯ ಅಂತಿಮಗೊಳಿಸಬೇಕು. ಇನ್ನು 8 ದಿನಗಳೊಳಗೆ ಪರಿಹಾರ ಮೊತ್ತ ಆಯಾ ಕಾರ್ವಿುಕರ ಖಾತೆಗೆ ಬರುವಂತೆ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು. ಆಹಾರ ಕಿಟ್ ವಿತರಣೆ ಸಂಬಂಧ ನೋಂದಾಯಿತ ಕಾರ್ವಿುಕರಿಗೆ ಮಾತ್ರ ವಿತರಿಸಲು ಸೂಕ್ತ ಕ್ರಮವಹಿಸುವುದಾಗಿ ತಿಳಿಸಿದರು. ಈ ವೇಳೆ ಪ್ರಮುಖರಾದ ನಾಗಪ್ಪ ನಾಯ್ಕ, ಜೂಜೆ ಡಿಸೋಜಾ, ಕಮಲಾಕರ ಜಿ.ಎಚ್., ಗಣಪತಿ ನಾಯ್ಕ, ರಮೇಶ ಭೋವಿವಡ್ಡರ್ ಇತರರಿದ್ದರು.