

ಬ್ಯಾಡಗಿ: ಪಟ್ಟಣ ಹಾಗೂ ಮೋಟೆಬೆನ್ನೂರ ಗ್ರಾಮದ ಕೋಲ್ಡ್ ಸ್ಟೋರೇಜ್ಗಳ ಮೇಲೆ ಶುಕ್ರವಾರ ದಾಳಿ ನಡೆಸಿದ ಜಿಲ್ಲಾ ಜಾಗ್ರತ ದಳ, ನಕಲಿ ಗೋವಿನಜೋಳದ ಬೀಜಗಳ ಚೀಲಗಳನ್ನು ವಶಪಡಿಸಿಕೊಂಡಿದೆ.
ಪಟ್ಟಣದ ಸೂರ್ಯ ಕೋಲ್ಡ್ ಸ್ಟೋರೇಜ್ನಲ್ಲಿ 3 ಸಾವಿರ ಕ್ವಿಂಟಾಲ್, ಮೊಟೆಬೆನ್ನೂರು ಗ್ರಾಮದ ಬಳಿಯ ವಕ್ರತುಂಡ ಅಗ್ರಿಟೆಕ್ ಪ್ರೈ.ಲಿಮಿಟೆಡ್ನಲ್ಲಿ ಸಂಗ್ರಹಿಸಿಟ್ಟಿದ್ದ 5 ಸಾವಿರ ಕ್ವಿಂಟಾಲ್ ನಕಲಿ ಗೋವಿನ ಜೋಳದ ಬೀಜಗಳ ಚೀಲಗಳನ್ನು ವಶಪಡಿಸಿಕೊಂಡಿದೆ. ಇವುಗಳ ಅಂದಾಜು ಮೌಲ್ಯ 8 ಕೋಟಿ ರೂ. ಎಂದು ತಿಳಿದುಬಂದಿದೆ.
ಜಿಲ್ಲಾ ಜಂಟಿ ಸಹಾಯಕ ನಿರ್ದೇಶಕ ಡಾ.ಬಿ.ಮಂಜುನಾಥ, ಉಪನಿರ್ದೇಶಕಿ ಸ್ಪೂರ್ತಿ ಜಿ.ಎಸ್., ಸಿಪಿಐ ಭಾಗ್ಯವತಿ ಬಂತಿ, ಸಹಾಯಕ ಕೃಷಿ ನಿರ್ದೇಶಕ ಎಚ್.ಬಿ. ಗೌಡಪ್ಪಳವರ, ಜಿಲ್ಲಾ ಜಾಗ್ರತ ದಳದ ನಿರ್ದೇಶಕ ಸುನೀಲಕುಮಾರ ನಾಯಕ ದಾಳಿ ಕಾರ್ಯಾಚರಣೆಯಲ್ಲಿದ್ದರು.
ಕೋಲ್ಡ್ ಸ್ಟೋರೇಜ್ಗಳಲ್ಲಿ ನಕಲಿ ಬೀಜ ಸಂಗ್ರಹಿಸಿದವರು ಯಾರು, ಎಲ್ಲಿಂದ ತಂದಿಡಲಾಗಿದೆ. ಯಾವ ಅಂಗಡಿಗಳಿಗೆ ನಕಲಿ ಬೀಜ ಪೂರೈಸಲಾಗುತ್ತಿತ್ತು ಎಂಬ ನಿಟ್ಟಿನಲ್ಲಿ ಸಮಗ್ರ ತನಿಖೆ ನಡೆಯುತ್ತಿದೆ.