

ರಾಣೆಬೆನ್ನೂರ: ನಗರ ಸೇರಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಮಳೆ ನಿರಂತರ ಮುಂದುವರಿದಿದ್ದು, ಜನಜೀವನ ತತ್ತರಿಸಿ ಹೋಗಿದೆ.
ತಾಲೂಕಿನ ಇಟಗಿ, ಮಣಕೂರ, ಮುದೇನೂರ, ಅಸುಂಡಿ, ಯರೇಕುಪ್ಪಿ, ತುಮ್ಮಿನಕಟ್ಟಿ ಮತ್ತಿತರ ಗ್ರಾಮಗಳಲ್ಲಿ ಮೆಕ್ಕೆಜೋಳ, ಹತ್ತಿ, ಶೇಂಗಾ, ಉಳ್ಳಾಗಡ್ಡಿ, ಬೆಳ್ಳುಳ್ಳಿ ಬೆಳೆ ಜಲಾವೃತವಾಗಿವೆ. ಅರ್ಧದಷ್ಟು ಬೆಳೆ ಈಗಾಗಲೇ ಕೊಳೆತು ಹೋಗಿದ್ದು, ರೈತರು ಕಣ್ಣೀರು ಹಾಕುವ ದುಸ್ಥಿತಿ ಎದುರಾಗಿದೆ.
ತುಂಗಭದ್ರಾ ಹಾಗೂ ಕುಮುದ್ವತಿ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ ಪಾತ್ರದ ಕುಪ್ಪೇಲೂರ, ಹಿರೇಬಿದರಿ, ಮುಷ್ಟೂರು, ಹಿರೇಬಿದರಿ, ಮೇಡ್ಲೇರಿ, ಬೇಲೂರು ಗ್ರಾಮಗಳ ಬಳಿ ನದಿ ನೀರು ಅಕ್ಕಪಕ್ಕದ ಜಮೀನುಗಳಿಗೆ ನುಗ್ಗಿ ಭತ್ತ, ಮೆಕ್ಕೆಜೋಳ ಬೆಳೆ ಹಾನಿಯಾಗಿದೆ. ಮಳೆ ಇದೇ ರೀತಿ ಮುಂದುವರಿದರೆ ಬೆಳೆಗಳು ಸಂಪೂರ್ಣ ನೀರು ಪಾಲಾಗಲಿವೆ ಎಂಬುದು ರೈತರ ಅಳಲು.
ಶಾಸಕರಿಂದ ಸಮೀಕ್ಷೆ: ಮಳೆಯಿಂದ ಹಾನಿಯಾದ ಜಮೀನುಗಳಿಗೆ ಶಾಸಕ ಅರುಣಕುಮಾರ ಪೂಜಾರ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಇಟಗಿ, ಮುದೇನೂರ, ಚಳಗೇರಿ, ಬೇಲೂರು ಮತ್ತಿತರ ಗ್ರಾಮದಲ್ಲಿ ಮೆಕ್ಕೆಜೋಳ, ಹತ್ತಿ, ಶೇಂಗಾ ಬೆಳೆ ಹಾನಿ ಪರಿಶೀಲಿಸಿದರು.
ಮಾಧ್ಯಮದರೊಂದಿಗೆ ಮಾತನಾಡಿ, ತಾಲೂಕಿನಲ್ಲಿ ನಿರಂತರ ಮಳೆಯಿಂದ ಮೆಕ್ಕೆಜೋಳ, ಹತ್ತಿ, ಶೇಂಗಾ ಹಾಗೂ ಇತರ ಬೆಳೆಗಳು ಸೇರಿ 6 ಸಾವಿರ ಹೆಕ್ಟೇರ್ನಷ್ಟು ಹಾಗೂ 2 ಸಾವಿರ ಹೆಕ್ಟೇರ್ನಷ್ಟು ತೋಟಗಾರಿಕೆ ಬೆಳೆ ಹಾನಿಯಾಗಿದೆ. 250ಕ್ಕೂ ಅಧಿಕ ಮನೆಗಳು ಕುಸಿದಿವೆ ಎಂದರು.
ಮಳೆ ಹಾನಿ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ. ಆದಷ್ಟು ಬೇಗ ರೈತರಿಗೆ ಪರಿಹಾರ ಸಿಗಲಿದೆ. ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸಮೀಕ್ಷೆ ಮುಂದುವರಿಸಲು ಸೂಚಿಸಲಾಗಿದೆ. ಮಳೆ ಸಂಪೂರ್ಣ ನಿಂತ ಬಳಿಕ ಹಾನಿಯ ಪ್ರಮಾಣ ನಿಖರವಾಗಿ ತಿಳಿಯಲಿದೆ ಎಂದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ನರಸಗೊಂಡರ, ವಾಲ್ಮೀಕಿ ಅಭಿವೃದ್ಧಿ ನಿಗಮದ ನಿರ್ದೇಶಕ ಬಸವರಾಜ ಚಳಗೇರಿ ಮತ್ತಿತರರು ಇದ್ದರು.