7ರಿಂದ ದಡಾರ, ರುಬೆಲ್ಲಾ ಲಸಿಕಾ ಅಭಿಯಾನ

dadara
ಡಿಸಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ಡಿಸಿ ಸಿ.ಎನ್.ಮೀನಾ ನಾಗರಾಜ್ ಮಾತನಾಡಿದರು. ಡಾ. ಗೋಪಾಲಕೃಷ್ಣ, ಡಾ.ಅಶ್ವತ್ಥ್‌ಬಾಬು, ಭರತ್ ಇದ್ದರು.
Published on

ಚಿಕ್ಕಮಗಳೂರು: ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಆರೋಗ್ಯ ಇಲಾಖೆಯಿಂದ ಏರ್ಪಡಿಸುವ ಆರೋಗ್ಯ ಜಾಗೃತಿ ಕಾರ್ಯಕ್ರಮಗಳಿಗೆ ಹಾಗೂ ಲಸಿಕಾ ಅಭಿಯಾನಗಳನ್ನು ಯಶಸ್ವಿಯಾಗಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಿಳಿಸಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ 5 ವರ್ಷದೊಳಗಿನ ಎಲ್ಲ ಮಕ್ಕಳು ಹಾಗೂ ಗರ್ಭಿಣಿಯರಿಗೆ ಲಸಿಕೆ ಹಾಕಲು ಕ್ರಮ ಕೈಗೊಳ್ಳಬೇಕು ಎಂದರು.
ಆ.7ರಂದು ಐದು ವರ್ಷದ ಒಳಗಿನ ಮಕ್ಕಳಿಗೆ ಪ್ರಥಮ ಹಂತದಲ್ಲಿ, 12ರಂದು ಎರಡನೇ ಹಂತ, 16ರಂದು ಮೂರನೇ ಹಂತದಲ್ಲಿ, ಅ.9 ಮತ್ತು 14ರಂದು ದಡಾರ ಮತ್ತು ರುಬೆಲ್ಲಾ ಲಸಿಕೆ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಅಭಿಯಾನ ಹಮ್ಮಿಕೊಳ್ಳುವ ಮೊದಲು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ದಡಾರ, ರುಬೆಲ್ಲಾ ಸಂಪೂರ್ಣ ನಿಯಂತ್ರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಮಳೆಗಾಲವಾದ್ದರಿಂದ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳಾದ ಡೆಂೆ, ಚಿಕೂನ್‌ಗುನ್ಯಾ, ಮಲೇರಿಯಾ ರೋಗಗಳ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ರೋಗಗಳಿಂದ ಮುಕ್ತರಾಗಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಡಿಎಚ್‌ಒ ಡಾ. ಅಶ್ವತ್ಥ್‌ಬಾಬು ಮಾತನಾಡಿ, ಜಿಲ್ಲೆಯಲ್ಲಿ 71 ಸ್ಕಾೃನಿಂಗ್ ಸೆಂಟರ್‌ಗಳಿವೆ. ಈ ಪೈಕಿ 14 ಕೇಂದ್ರಗಳನ್ನು ಕಾರಣಾಂತರದಿಂದ ರದ್ದುಪಡಿಸಲಾಗಿದೆ. ಉಳಿದ 57 ಕೇಂದ್ರಗಳಲ್ಲಿ ದಾಖಲಾಗುವ ರೋಗಿಗಳ ವಿವಿಧ ಕಾಯಿಲೆಗಳು ಪತ್ತೆ ಮತ್ತು ಅದರ ನಿವಾರಣೆಗೆ ಬಳಕೆಯಾಗುತ್ತಿವೆ ಎಂದು ಮಾಹಿತಿ ನೀಡಿದರು. ಜಿಪಂ ಸಿಇಒ ಡಾ. ಗೋಪಾಲಕೃಷ್ಣ, ಆರ್‌ಸಿಚ್ ಅಧಿಕಾರಿ ಡಾ. ಭರತ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮಂಜುನಾಥ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net