

ಬೇಲೂರು: ಪಟ್ಟಣದ ಪುರಸಭೆಯ 7ನೇ ವಾರ್ಡ್‌ನಲ್ಲಿ ಅಸಮರ್ಪಕ ಚರಂಡಿ ಕಾಮಗಾರಿ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ ಹಿನ್ನೆಲೆಯಲ್ಲಿ ವಾರ್ಡ್‌ನ ಸದಸ್ಯೆ ತೀರ್ಥಕುಮಾರಿ ವೆಂಕಟೇಶ್ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕಾಮಗಾರಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸದಸ್ಯೆ ತೀರ್ಥಕುಮಾರಿ ವೆಂಕಟೇಶ್, 7ನೇ ವಾರ್ಡಿನಲ್ಲಿ ಗುತ್ತಿಗೆದಾರರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಆದರೆ, ಕೆಲಸ ಮಾಡಿದ ನಂತರ ಅಳಿದುಳಿದ ವಸ್ತುಗಳನ್ನು ಅಲ್ಲಿಯೇ ಬಿಟ್ಟಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಇದನ್ನೇ ಕಳಪೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಆದರೆ, ಅದನ್ನೆಲ್ಲ ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿದೆ. ಅಲ್ಲದೆ, ಚುನಾವಣೆ ಸಂದರ್ಭ ನಾನು ಮಾತು ಕೊಟ್ಟಂತೆ 7ನೇ ವಾರ್ಡ್‌ನ ಅಭಿವೃದ್ಧಿಗೆ ಮುಂದಾಗಿ ಹಲವಾರು ಕೆಲಸಗಳನ್ನು ಮಾಡಿಸಿದ್ದೇನೆ. ಕಾಮಗಾರಿ ಗುಣಮಟ್ಟವನ್ನು ಸ್ವತಃ ಇಲಾಖೆಯ ಇಂಜಿನಿಯರ್ ಪರಿಶೀಲಿಸಿದ್ದು ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದಿದ್ದಾರೆ. ಇಲ್ಲಿ ಯಾವುದೇ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತಂದರೆ ತಕ್ಷಣ ಕ್ರಮವಹಿಸಲಾಗುವುದು. ಕಾಮಗಾರಿ ಕಳಪೆಯಾಗಿದ್ದರೆ ಬಿಲ್ ತಡೆ ಹಿಡಿಸಲಾಗುವುದು. ಗುಣಮಟ್ಟದ ಕೆಲಸ ಮಾಡಿದ್ದರೂ ಆರೋಪ ಮಾಡುವುದು ಸರಿಯಲ್ಲ ಎಂದರು.
ಸ್ಥಳೀಯರಾದ ಈಶ್ವರ್ ಹಾಗೂ ಕಿರಣ್ ಮಾತನಾಡಿ, ಕಸವನ್ನು ಚರಂಡಿಗೆ ಹಾಕುತ್ತಿದ್ದರಿಂದ ಸಮಸ್ಯೆಯಾಗಿತ್ತು. ಇದನ್ನು ಸದಸ್ಯರ ಗಮನಕ್ಕೆ ತಂದಾಗ ಕಾಂಕ್ರೀಟ್ ಸ್ಲ್ಯಾಬ್ ಸೇರಿದಂತೆ ಇತರ ಕೆಲಸಗಳನ್ನು ಮಾಡಿಸಿದ್ದಾರೆ. ಮುಂದೆಯೂ ಇದೇ ರೀತಿ ಉತ್ತಮ ಕೆಲಸ ಮಾಡಿಸಲಿ ಎಂದರು.