ಮತ್ಸ್ಯ ಕಾರ್ಮಿಕ ಮಾದರಿ ಗ್ರಾಮಕ್ಕೆ ಉತ್ತೇಜನ :ಮೀನುಗಾರಿಕಾ ವಲಯಕ್ಕೆ ಬೆಂಬಲ : ಯೋಜನೆಗೆ ಏಳು ಕೋಟಿ ರೂ. ಮಂಜೂರು

fish
Published on

ವಿಜಯವಾಣಿ ಸುದ್ದಿಜಾಲ ಬದಿಯಡ್ಕ

ಜಿಲ್ಲೆಯ ಮೀನುಗಾರಿಕಾ ವಲಯಕ್ಕೆ ಉತ್ತೇಜನ ನೀಡಲು ಶಿರಿಯ ಕೇಂದ್ರೀಕರಿಸಿ ಮಾದರಿ ಮೀನು ಕಾರ್ಮಿಕ ಗ್ರಾಮ ನಿರ್ಮಾಣವಾಗುತ್ತಿದೆ. ಶಿರಿಯ, ಮಂಗಲ್ಪಾಡಿ, ಮಂಜೇಶ್ವರ ಭಾಗಗಳು ಇದರಲ್ಲಿ ಒಳಪಡಲಿವೆ.

ಮೀನುಗಾರಿಕಾ ವಲಯದ ಮೂಲಸೌಕರ್ಯ ಕೊರತೆ ನೀಗಿಸಿ ಸಮಗ್ರ ಅಭಿವೃದ್ಧಿಗೆ ಪೂರಕವಾಗುವಂತೆ ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್‌ವೈ) ಯಲ್ಲಿ ಒಳಪಡಿಸಿ ಕೇಂದ್ರ, ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಮೀನು ಕಾರ್ಮಿಕ ಗ್ರಾಮ ನಿರ್ಮಾಣವಾಗಲಿದೆ. ಇದಕ್ಕಾಗಿ 7.04 ಕೋಟಿ ರೂ. ಮಂಜೂರು ಮಾಡಲಾಗಿದೆ.

ಅನುದಾನದಲ್ಲಿ 3.73 ಕೋಟಿ ರೂ. ಕೇಂದ್ರ ಸರ್ಕಾರದ ಪಾಲಿದ್ದು, ರಾಜ್ಯ ಸರ್ಕಾರ 3.31 ಕೋಟಿ ರೂ. ಭರಿಸಬೇಕು. ಕರಾವಳಿ ಅಭಿವೃದ್ಧಿ ನಿಗಮ ಯೋಜನೆ ಜಾರಿಗೊಳಿಸುತ್ತಿದ್ದು, ಆಧುನಿಕ ಸೌಕರ್ಯ, ಉದ್ಯೋಗ ಅವಕಾಶ ಸೃಷ್ಟಿಸಲು ಉದ್ದೇಶಿಸಲಾಗಿದೆ. ಈ ಮೂಲಕ ಮತ್ಸ್ಯ ವಲಯ ಆಶ್ರಯಿಸಿರುವವರಿಗೆ ಆರ್ಥಿಕ ಭದ್ರತೆ ಯೋಜನೆ ಖಾತರಿಪಡಿಸುತ್ತದೆ.

ಸಮುದ್ರ ಜೀವಿಗಳಿಗೆ ಸುಸ್ಥಿರ ಆವಾಸ ಕೇಂದ್ರ ಕಲ್ಪಿಸಲು ಆರ್ಟಿಫಿಶಿಯಲ್ ರೀಫ್‌ಗಳನ್ನೂ ನಿರ್ಮಿಸಲಾಗುವುದು. ಕಡಲ ತೀರ ಸಂರಕ್ಷಣೆಗಾಗಿ ಗಾಳಿ ಮರ ನೆಟ್ಟು ಬೆಳೆಸಿ ಕೋಸ್ಟಲ್ ಬಯೋಶೀಲ್ಡ್ ನಿರ್ಮಿಸಲಾಗುವುದು. ಔಟ್‌ಬೋರ್ಡ್ ಇಂಜಿನ್‌ಗಳ ದುರಸ್ತಿ ಕಾಮಗಾರಿಗಿರುವ ಸೌಕರ್ಯ ಶಿರಿಯದಲ್ಲಿ ಸ್ಥಾಪನೆಗೊಳ್ಳಲಿದೆ.

ಮಂಜೇಶ್ವರ ಬಂದರಿನಲ್ಲಿ ಹೊಸ ಸೌಲಭ್ಯ

ಮಂಜೇಶ್ವರ ಮೀನುಗಾರಿಕಾ ಬಂದರಿನಲ್ಲಿ ಮತ್ಸ್ಯ ತಿನಿಸುಗಳ ಭೋಜನಾಲಯ, ಮಲಿನ ಜಲ ಶುದ್ಧೀಕರಣ ಪ್ಲಾಂಟ್, ಮೀನು ಸಂಸ್ಕರಣಾ ಘಟಕ ಸಜ್ಜುಗೊಳಿಸಲಾಗುತ್ತದೆ. ಜತೆಗೆ ಶೌಚಗೃಹ ಸಂಕೀರ್ಣ, ಮಂಗಲ್ಪಾಡಿಯಲ್ಲಿ ಮಲ್ಟಿಲೆವೆಲ್ ಲರ್ನಿಂಗ್ ಸೆಂಟರ್, ಮುಸೋಡಿಯಲ್ಲಿ ಕಮ್ಯೂನಿಟಿ ಸೆಂಟರ್, ರೆಸ್ಕೂೃ ಶೆಲ್ಟರ್ ನಿರ್ಮಾಣವಾಗಲಿದ್ದು, ಕಡಲ್ಕೊರೆತ ಸಂದರ್ಭ ಕರಾವಳಿಯ ಕುಟುಂಬಗಳನ್ನು ರಕ್ಷಿಸಲು ಇವು ನೆರವಾಗಲಿವೆ.

ಜಿಲ್ಲೆ ಮೀನುಗಾರಿಕಾ ವಲಯದ ಸುಸ್ಥಿರ ಅಭಿವೃದ್ಧಿ ಸಾಕಾರಗೊಳಿಸಲು ಜಾರಿಗೊಳಿಸುವ ಪ್ರಧಾನ ಯೋಜನೆಯೇ ಮಾದರಿ ಮತ್ಸೃ ಗ್ರಾಮ. ಮೀನು ಕಾರ್ಮಿಕರ ಸಾಮಾಜಿಕ ಹಾಗೂ ಆರ್ಥಿಕ ಸುರಕ್ಷೆ, ಹೆಚ್ಚಿನ ಉದ್ಯೋಗಾವಕಾಶಗಳ ಸೃಷ್ಟಿ, ಮತ್ಸೃ ಗ್ರಾಮದ ಮೂಲಸೌಕರ್ಯ ಅಭಿವೃದ್ಧಿ, ಸುಸ್ಥಿರ ಮೀನುಗಾರಿಕೆಗೆ ಬೆಂಬಲ, ಕಡಲ ತೀರದ ಸಂರಕ್ಷಣೆ ಯೋಜನೆ ಮೂಲಕ ಉದ್ದೇಶಿಸಲಾಗಿದೆ.- ಕೆ.ಎ.ಲಬೀಬ್ಮೀನುಗಾರಿಕಾ ಸಹಾಯಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net