

ಶಿಡ್ಲಘಟ್ಟ: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಇನ್ನೂ ಎರಡು ದಿನಗಳ ಕಾಲ ನಡೆಯಲಿದ್ದು, ಗಣತಿದಾರರು ತಮ್ಮ ಮನೆ ಬಳಿ ಬಂದಾಗ ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು ಎಂದು ತಹಸೀಲ್ದಾರ್ ಎಸ್.ಗಗನ ಸಿಂಧು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಗರದ ಸಿದ್ಧಾರ್ಥ ನಗರದಲ್ಲಿ ಖುದ್ದು ಮನೆ ಮನೆಗೆ ಭೇಟಿ ನೀಡಿ ಸಮೀಾ ಕಾರ್ಯವನ್ನು ಪರಿಶೀಲಿಸಿ ಮಾತನಾಡಿದರು. ರಜೆ ದಿನವಾದ ಭಾನುವಾರವೂ ಸಮೀಕ್ಷೆನಡೆಸಿದ್ದು, ಸೋಮವಾರ ಮತ್ತು ಮಂಗಳವಾರವೂ ಮುಂದುವರಿಯಲಿದೆ. ಎಲ್ಲ ಕಾಲಂಗಳಿಗೆ ಕಡ್ಡಾಯವಾಗಿ ಉತ್ತರಿಸಬೇಕೆಂದೇನಿಲ್ಲ. ನಿಮಗೆ ಇಷ್ಟ ಇಲ್ಲ ಎಂದಾದರೆ ಆ ಪ್ರಶ್ನೆಗೆ ಉತ್ತರಿಸಬೇಡಿ ಎಂದರು.
ಕೆಲ ತಾಂತ್ರಿಕ ಕಾರಣಗಳಿಂದಾಗಿ ಸಮೀಕ್ಷೆ ನಿರೀತ ವೇಗದಲ್ಲಿ ನಡೆಯದಿದ್ದರೂ ಶೇ.76ಪ್ರಗತಿ ಸಾಧಿಸಲಾಗಿದೆ. ಇನ್ನುಳಿದ 2 ದಿನಗಳಲ್ಲಿ ಎಲ್ಲ ಮನೆಗಳ ಸಮೀಕ್ಷೆ ಕಾರ್ಯ ಮುಗಿಸಲಾಗುವುದು. ಮೊಬೈಲ್ ನೆಟ್ವರ್ಕ್ ಸಿಗದಿರುವುದು, ಮನೆಯವರು ಸೂಕ್ತ ದಾಖಲೆಗಳನ್ನು ಒದಗಿಸದಿರುವುದು, ಓಟಿಪಿ ನಂಬರ್ ಪಡೆಯಲು ತಡವಾಗುವುದು ಸೇರಿ ಹಲವು ತಾಂತ್ರಿಕ ದೋಷಗಳು ಸಮೀಕ್ಷೆ ಕಾರ್ಯಕ್ಕೆ ಅಡ್ಡಿಯಾಗುತ್ತಿದ್ದವು. ಆರಂಭದಲ್ಲಿದ್ದ ಸಮಸ್ಯೆಗಳು ಇದೀಗ ಕಡಿಮೆಯಾಗಿದ್ದು, ಸಮೀಕ್ಷೆ ಭರದಿಂದ ಸಾಗಿದೆ. ಮನೆಗೆ ಗಣತಿದಾರರು ಬಾರದಿದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿ, ಸಂಬಂಧಿಸಿದ ಗಣತಿದಾರರನ್ನು ನಿಮ್ಮ ಮನೆಗೆ ಕಳುಹಿಸಲಾಗುವುದು ಎಂದು ತಿಳಿಸಿದರು.