

ವಿಜಯವಾಣಿ ಸುದ್ದಿಜಾಲ ಕಾರವಾರ: ಜಿಲ್ಲೆಯಲ್ಲಿ ಬುಧವಾರ 75 ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ. 107 ಜನ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ.
ಹಳಿಯಾಳ ಹಾಗೂ ದಾಂಡೇಲಿಯಲ್ಲಿ ಒಟ್ಟು 36, ಕಾರವಾರ ಹಾಗೂ ಅಂಕೋಲಾದಲ್ಲಿ ತಲಾ 6, ಶಿರಸಿ- 9, ಮುಂಡಗೋಡ- 7, ಹೊನ್ನಾವರ- 3, ಭಟ್ಕಳ- 4, ಜೊಯಿಡಾ- 2, ಕುಮಟಾ ಹಾಗೂ ಯಲ್ಲಾಪುರದಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿವೆ.
ಕಾರವಾರದಿಂದ ಒಬ್ಬ, ಅಂಕೋಲಾದಿಂದ ಮೂವರು, ಕುಮಟಾದಿಂದ 10, ಭಟ್ಕಳದಿಂದ 15, ಹಳಿಯಾಳ ದಾಂಡೇಲಿಯಿಂದ 78 ಜನರು ಗುಣ ಹೊಂದಿ ಬಿಡುಗಡೆಯಾಗಿದ್ದಾರೆ.
ಒಟ್ಟಾರೆ ಸೋಂಕಿತರಲ್ಲಿ 11 ವೃದ್ಧರು 10 ಮಕ್ಕಳು ಇದ್ದಾರೆ. 13 ಜನರಿಗೆ ಜ್ವರದ ಲಕ್ಷಣ (ಐಎಲ್ಐ ಹಾಗೂ ಸಾರಿ)ಗಳಿವೆ. ಹೊರ ಊರುಗಳಿಂದ ಬಂದ 13 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 11 ಜನರ ಸೋಂಕಿನ ಮೂಲ ಪತ್ತೆಯಾಗಿಲ್ಲ.
ಹಳಿಯಾಳದಲ್ಲಿ ಉಲ್ಬಣ: ಹಳಿಯಾಳದಲ್ಲಿ ಮತ್ತೆ ಕರೊನಾ ಅಬ್ಬರ ಕಂಡುಬಂದಿದೆ. ತೇರಗಾಂವ ಗ್ರಾಮದಲ್ಲಿ ಸೋಂಕಿತರ ಸಂಪರ್ಕದಿಂದ 8, ಪಟ್ಟಣದಲ್ಲಿ 11, ಬಿ.ಕೆ.ಹಳ್ಳಿ, ಬಸನವನ ಹಳ್ಳಿ, ಕೆ.ಕೆ.ಹಳ್ಳಿ, ತಟ್ಟಿಗೇರಿ ಜೋಗನಕೊಪ್ಪದಲ್ಲಿ ತಲಾ ತ ಪ್ರಕರಣಗಳು ಪತ್ತೆಯಾಗಿವೆ.
ದಾಂಡೇಲಿಯಲ್ಲಿ 12 ಪ್ರಕರಣಗಳು ಪತ್ತೆಯಾಗಿವೆ. ಸುಭಾಷ್ ನಗರ, ಸಂಡೆ ಮಾರ್ಕೆಟ್, ಗಾಂಧಿ ನಗರ ವೆಸ್ಟ್ ಕೋಸ್ಟ್ ಕಾರ್ಖಾನೆಯ ವಿವಿಧ ಮನೆಗಳ ಸಮೀಪ ಸೋಂಕಿತರು ಕಂಡುಬಂದಿದ್ದಾರೆ.
ಹೊನ್ನಾವರ ಠಾಣೆ ಸೀಲ್ಡೌನ್: ಹೊನ್ನಾವರ ಪೊಲೀಸ್ ಠಾಣೆಯ ಒಟ್ಟು ಮೂವರಿಗೆ ಕರೊನಾ ಖಚಿತವಾದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ. ಕಾರವಾರದಲ್ಲಿ ಕೆಎಚ್ಬಿ ಕಾಲನಿಯಲ್ಲಿ ಇಬ್ಬರು, ಬಾಂಡಿಶಿಟ್ಟಾ, ಪದ್ಮನಾಭನಗರ, ಸುಂಕೇರಿ, ನದಿವಾಡಗಳಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ. ಶಿರಸಿಯ ಭೀಮನಗುಡ್ಡದಲ್ಲಿ ಮತ್ತು ಕಸ್ತೂರಬಾ ನಗರದಲ್ಲಿ ತಲಾ 2, ವಿಜಯನಗರ, ಲಯನ್ ನಗರ, ಸಿಂಪಿಗಲ್ಲಿ, ತಲಾ ಒಂದು ಪ್ರಕರಣಗಳು ಕಂಡುಬಂದಿವೆ.
ಮರಣ ಹೊಂದಿದವರಿಗೆ ಇತ್ತು ಅನ್ಯ ಕಾಯಿಲೆ: ಕರೊನಾ ದೃಢಪಟ್ಟ ಅಂಕೋಲಾದ 76 ವರ್ಷದ ವೃದ್ಧನನ್ನು ಬುಧವಾರ ಕ್ರಿಮ್್ಸ ಆಸ್ಪತ್ರೆಗೆ ತರಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ಸಾವನ್ನಪ್ಪಿದ್ದಾರೆ. ಅನ್ಯ ಕಾಯಿಲೆಯಿಂದ ಬಳಲುತ್ತಿದ್ದ ಹೊನ್ನಾವರದ ಇನ್ನೊಬ್ಬ ವೃದ್ಧ ಕೂಡ ಕೋವಿಡ್ ತಗುಲಿ ಮೃತಪಟ್ಟಿದ್ದಾರೆ.