ಎಸ್​ಪಿ ಹೆಸರಲ್ಲಿ 75 ಸಾವಿರ ರೂ. ವಂಚನೆ

H26 Cyber Crime (1)
Published on



ರಾಮನಗರ
ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಾರ್ತಿಕ್​ ರೆಡ್ಡಿ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆ ತೆರೆದು, ಜಿಪಂ ಉದ್ಯೋಗಿಯೊಬ್ಬರಿಂದ 75 ಸಾವಿರ ರೂ. ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ರಾಮನಗರ ಜಿಪಂ ಉದ್ಯೋಗಿ ಆಗಿರುವ ಅನಿಲ್​ ವಂಚನೆಗೆ ಒಳಗಾದವರು.

ಜಿಪಂನಲ್ಲಿ ನಡೆಯುವ ಹಲವಾರು ಸಭೆಗಳಲ್ಲಿ ಎಸ್​ಪಿ ಕಾರ್ತಿಕ್​ ರೆಡ್ಡಿ ಅವರನ್ನು ನೋಡಿದ್ದ ಜಿಪಂ ಉದ್ಯೋಗಿ ಅನಿಲ್​ ಅವರು, ಫೇಸ್​ಬುಕ್​ ಅಕೌಂಟ್​ನಲ್ಲಿ ಕಾರ್ತಿಕ್​ ರೆಡ್ಡಿ ಅವರಿಗೆ ಫ್ರೆಂಡ್​ ರಿಕ್ವೆಸ್ಟ್​ ಕಳುಹಿಸಿದ್ದರು. ಪ್ರೆಂಡ್​ ರಿಕ್ವೆಸ್ಟ್​ಗೆ ಸ್ಪಂದನೆ ಸಿಗುತ್ತಿದ್ದಂತೆ ಅನಿಲ್​ ಮೊದಲಿಗೆ ತಾವೇ ಮೆಸೇಜ್​ ಮಾಡಿ ಗುಡ್​ನೈಟ್​ ಸರ್​ ಎಂದು ಪ್ರತಿಕ್ರಿಯಿಸಿದ್ದರು. ಆ ಕಡೆಯಿಂದ ಹೇಗಿದ್ದೀರಿ ಎಂದು ಮರು ಸಂದೇಶ ಬಂದಿತ್ತು.


ಹೀಗೆ ಕುಶಲೋಕಪರಿ ನಡೆದು ಮತ್ತೊಂದು ದಿನ ನನ್ನ ಸ್ನೇಹಿತ ಸಿಆರ್​ಪಿಎಫ್​ನಲ್ಲಿದ್ದು, ಅವನಿಗೆ ವರ್ಗಾವಣೆ ಆಗಿದೆ, ಅವನ ಬಳಿ ಇರುವ ಟಿವಿ, ಸೋಫಾ, ಫ್ರಿಡ್ಜ್​ ಸೇರಿ ಎಲ್ಲವನ್ನೂ 75 ಸಾವಿರ ರೂ.ಗಳಿಗೆ ನೀಡುತ್ತಾನೆ ಎಂಬ ಸಂದೇಶ ಕಾರ್ತಿಕ್​ ರೆಡ್ಡಿ ಅವರಿಂದ ಅನಿಲ್​ಗೆ ಬಂದಿತ್ತು. ಇಷ್ಟೇ ಅಲ್ಲದೆ, ಸಂತೋಷ್​ ಎಂಬುವರ ಮೊಬೈಲ್​ ನಂಬರ್​ ಅನ್ನು ಅನಿಲ್​ಗೆ ಶೇರ್​ ಮಾಡಲಾಗಿತ್ತು. ಈ ಮೆಸೇಜ್​ ಆಧರಿಸಿ ಅನಿಲ್​, ಆತ ನೀಡಿದ ನಂಬರ್​ಗೆ 75 ಸಾವಿರ ರೂ.ಗಳನ್ನು ಯುಪಿಐ ಆ್ಯಪ್​ ಮೂಲಕ ವರ್ಗಾವಣೆ ಮಾಡಿದ್ದರು.

ಆದರೆ ನಿಗದಿತ ಸಮಯಕ್ಕೆ ಯಾವುದೇ ವಸ್ತುಗಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡು ಎಸ್​ಪಿ ಕಾರ್ತಿಕ್​ ರೆಡ್ಡಿ ಅವರ ಫೋಟೋ ಇರುವ ಫೇಸ್​ಬುಕ್​ ಖಾತೆಯ ಮೆಸೆಂಜರ್​ನಲ್ಲಿ ಆಗಿರುವ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಆದರೆ, ಅಲ್ಲಿಂದಲೂ ಯಾವುದೇ ಉತ್ತರ ಬಾರದಿದ್ದಾಗ ಅದು ಕಾರ್ತಿಕ್​ ರೆಡ್ಡಿ ಅವರ ನಕಲಿ ಫೇಸ್​ಬುಕ್​ ಅಕೌಂಟ್​ ಎಂಬುದು ಅವರಿಗೆ ಗೊತ್ತಾಗಿದೆ. ಮೋಸ ಹೋಗಿರುವುದು ತಿಳಿದು ಸೆನ್​ ಠಾಣೆಗೆ ಗುರುವಾರ ಸಂಜೆ ದೂರು ನೀಡಿದ್ದಾರೆ.

ಹಲವರಿಗೆ ಮೋಸ

ಕಡಿಮೆ ಬೆಲೆಗೆ ಪೀಠೋಪಕರಣ ಮಾರಾಟ ಮಾಡಲಾಗುತ್ತಿದೆ ಎಂದು ನಂಬಿಸಿ ಪೊಲೀಸ್​ ಅಧಿಕಾರಿಗಳ ನಕಲಿ ಫೇಸ್​ ಬುಕ್​ ಅಕೌಂಟ್​ ಮೂಲಕ ಹಲವರನ್ನು ವಂಚಿಸುತ್ತಿರುವ ಪ್ರಕರಣಗಳು ಈಚೆಗೆ ಹೆಚ್ಚಾಗುತ್ತಿವೆ. ಬೆಂಗಳೂರು ನಿವೃತ್ತ ಪೊಲೀಸ್​ ಕಮಿಷನರ್​ ಹೆಸರಿನಲ್ಲಿ ಪತ್ರಕರ್ತರೊಬ್ಬರನ್ನು ಇದೇ ರೀತಿ ವಂಚಿಸುವ ಪ್ರಯತ್ನ ನಡೆದಿದ್ದು, ಅವರ ಪೊಲೀಸ್​ ಅಧಿಕಾರಿಯನ್ನೇ ನೇರವಾಗಿ ಸಂಪರ್ಕಿಸಿದಾಗ ವಂಚನೆಯ ಜಾಲದ ಕೃತ್ಯ ಎಂಬುದು ಗೊತ್ತಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net