73 ಕೆಜಿ ಗಂಧದ ಮರ ವಶ

23 HANUR 3
Published on

ಹನೂರು: ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ಧಾಮದಲ್ಲಿ ಎರಡು ಪತ್ಯೇಕ ಪ್ರಕರಣದಲ್ಲಿ ಶ್ರೀಗಂಧ ಮರವನ್ನು ಕತ್ತರಿಸಿ ಅಕ್ರಮವಾಗಿ ಸಾಗಿಸುತ್ತಿದ್ದ ತಮಿಳುನಾಡಿನ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಬಂಧಿಸಿದ್ದು ಮತ್ತಿಬ್ಬರು ಪರಾರಿಯಾಗಿದ್ದಾರೆ.

ತಮಿಳುನಾಡು ಮೂಲದ ಅಪ್ರಾಪ್ತ ಹಾಗೂ ಮತ್ತೊಂದು ಪ್ರಕರಣದಲ್ಲಿ ತಮಿಳುನಾಡಿನ ಸೇಲಂ ಜಿಲ್ಲೆಯ ಆತೂರು ತಾಲೂಕಿನ ನೈಯ್ಯಮಲೆ ಗ್ರಾಮದ ಸೆಡೆಯಾನ್ (45) ಬಂಧಿತ ಆರೋಪಿ. ತಮಿಳನಾಡಿನ ವಿಲ್ಲುಪುರಂ ಜಿಲ್ಲೆಯ ಪೆರುಮಾಳ್ ಮತ್ತು ಮುರುಗನ್ ಪರಾರಿಯಾಗಿದ್ದಾರೆ.

ಪ್ರಕರಣ 1: ಮಲೆಮಹದೇಶ್ವರ ವನ್ಯಜೀವಿ ಧಾಮದ ಕೊಕ್ಕಬರೆ ಗಸ್ತಿನ ದೊಡ್ಡಬರೆಹಳ್ಳ ಸಮೀಪದ ಮೀಸಲು ಅರಣ್ಯ ಪ್ರದೇಶದಲ್ಲಿ ಮೂವರು ಶ್ರೀಗಂಧ ಮರವನ್ನು ಕತ್ತರಿಸಿ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿದಾಗ ಅಪ್ರಾಪ್ತ ಸಿಕ್ಕಿ ಬಿದ್ದರೆ ಉಳಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. 62 ಕೆ.ಜಿ ಶ್ರೀಗಂಧದ 2 ತುಂಡುಗಳನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಅಪ್ರಾಪ್ತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಪರಾರಿಯಾದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ಪ್ರಕರಣ 2: ಮ.ಬೆಟ್ಟ ಸಮೀಪದ ಆನೆತಲೆ ದಿಂಬದ ಬಳಿ ಚೀಲವನ್ನು ಹೊತ್ತು ನಡೆದು ಸಾಗಿಸುತ್ತಿದ್ದ ಸೆಡೆಯಾನ್ ಎಂಬಾತನನ್ನು ಅನುಮಾನಗೊಂಡ ಅರಣ್ಯ ಇಲಾಖೆ ಅಧಿಕಾರಿಗಳು ತಡೆದು ಪರಿಶೀಲಿಸಿದಾಗ ಶ್ರೀಗಂಧ ಮರದ ತುಂಡುಗಳು ಇರುವುದು ಪತ್ತೆಯಾಗಿದೆ. ಬಳಿಕ 11.70 ಕೆ.ಜಿ ತೂಕವುಳ್ಳ 33 ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಅರುಣ್, ಡಿಆರ್‌ಎಫ್‌ಒಗಳಾದ ಮಹಾಂತೇಶ್ ಎಸ್.ಕುಂಬಾರ, ಧರ್ಮರಾಜ ಗುತ್ತೇದಾರ, ಸಿಬ್ಬಂದಿ ಸಿದ್ದರಾಮಣ್ಣ, ಚಿನ್ನರಾಜು, ಕುಮಾರ್, ರವಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net