ಕನ್ನಡಕ್ಕಾಗಿ 700 ಕಿಮೀ ಪಾದಯಾತ್ರೆ

10-RNR-03
Published on

ರಾಣೆಬೆನ್ನೂರ: ಸರೋಜಿನಿ ಮಹಿಷಿ ವರದಿ ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಹಾಗೂ ಕನ್ನಡ ಉಳಿಸಿ-ಬೆಳೆಸಿ ಎಂದು ಜಾಗೃತಿ ಮೂಡಿಸುವ ಸಲುವಾಗಿ ಕನ್ನಡ ಅಭಿಮಾನಿಯೊಬ್ಬ 700 ಕಿ.ಮೀ. ಪಾದಯಾತ್ರೆ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಶಿಗ್ಗಾಂವಿ ತಾಲೂಕಿನ ಮುಗಳಿ ಗ್ರಾಮದ ಕನ್ನಡ ಅಭಿಮಾನಿ ಮಂಜುನಾಥ ಭದ್ರಶೆಟ್ಟಿ ಪಾದಯಾತ್ರೆ ಕೈಗೊಂಡಿದ್ದಾರೆ. ಇವರು ಅ. 29ರಂದು ಆಂಧ್ರಪ್ರದೇಶ ಕಾಂಚನಪಲ್ಲಿ ಗ್ರಾಮದಿಂದ ಪಾದಯಾತ್ರೆ ಆರಂಭಿಸಿದ್ದು, ಮಂಗಳವಾರ ರಾಣೆಬೆನ್ನೂರಿಗೆ ಆಗಮಿಸಿದ್ದರು. ಮಂಜುನಾಥ ಬಿಎ, ಬಿ.ಎಡ್ ಪದವಿ ಪಡೆದುಕೊಂಡು ಚಿಕ್ಕಬಳ್ಳಾಪುರದ ಕೆಎಂಎಫ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಪ್ಪಟ ಕನ್ನಡದ ಪ್ರೇಮಿಯಾಗಿರುವ ಅವರು ಕನ್ನಡಕ್ಕಾಗಿ ತಮ್ಮದೊಂದು ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಪಾದಯಾತ್ರೆ ಮಾಡುತ್ತಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಮಂಜುನಾಥ, ‘ಸರೋಜಿನಿ ಮಹಿಷಿ ವರದಿ ಜಾರಿಯಾದರೆ ಕನ್ನಡಿಗರು ಸರ್ಕಾರಿ ನೌಕರಿ ಪಡೆಯಲು ಅನುಕೂಲವಾಗಲಿದೆ. ಕನ್ನಡ ಭಾಷೆಗೆ ಪೂಜನೀಯ ಭಾವ ನೀಡುವ ಉದ್ದೇಶದಿಂದ ತಾಲೂಕಿಗೊಂದು ಭುವನೇಶ್ವರಿ ಮಂದಿರ ನಿರ್ವಿುಸಬೇಕು. ಬೆಳಗಾವಿ ಗಡಿ ವಿವಾದ ಬಗೆಹರಿಸಬೇಕು ಎಂಬ ಮೂರು ಬೇಡಿಕೆ ಇಟ್ಟುಕೊಂಡು ಪಾದಯಾತ್ರೆ ಆರಂಭಿಸಿದ್ದೇನೆ. ನಿತ್ಯವೂ 30ರಿಂದ 35 ಕಿ.ಮೀ. ಪಾದಯಾತ್ರೆ ಮೂಲಕ ಎಲ್ಲ ಊರುಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ’ ಎಂದರು.

ಆಂಧ್ರದ ಗಡಿ ಭಾಗದಿಂದ ಆರಂಭವಾಗಿರುವ ಪಾದಯಾತ್ರೆ ಇನ್ನೂ ಹತ್ತು ದಿನದಲ್ಲಿ ಬೆಳಗಾವಿ ಗಡಿ ತಾಲೂಕು ನಿಪ್ಪಾಣಿಯಲ್ಲಿ ಅಂತ್ಯಗೊಳಿಸಲಾಗುವುದು. ಕೊನೆಯ ದಿನದಂದು ನಿಪ್ಪಾಣಿಯಲ್ಲಿ ಎಲ್ಲ ಕನ್ನಡಪರ ಹಾಗೂ ಇತರ ಸಂಘ-ಸಂಸ್ಥೆಗಳೊಂದಿಗೆ ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಅಲ್ಲಿಯ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ನಗರಕ್ಕೆ ಆಗಮಿಸಿದ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸನ್ಮಾನಿಸಿ, ಬೀಳ್ಕೊಟ್ಟರು. ಸಂಘಟನೆಯ ಜಿಲ್ಲಾಧ್ಯಕ್ಷ ಶಂಕರ ಕುರವತ್ತಿ, ತಾಲೂಕು ಅಧ್ಯಕ್ಷ ನಾಗರಾಜ ಹಾರೋಗೊಪ್ಪ, ಪ್ರಮುಖರಾದ ಶಶಿ ಬಳ್ಳಾರಿ, ಪರಸಪ್ಪ ಅಯ್ಯಜ್ಜನವರ ಮತ್ತಿತರರಿದ್ದರು.

ರಕ್ತದಿಂದ ಪುಸ್ತಕ ಬರೆದ ಪ್ರೇಮಿ...

ಕನ್ನಡದ ಬಗ್ಗೆ ಜಾಗೃತಿ ಮೂಡಿಸುತ್ತ ರಾಜ್ಯವನ್ನು ಸುತ್ತಾಡಿರುವ ಮಂಜುನಾಥ ಅವರು ‘ಅನುಭವದ ಅಲೆಗಳು’ ಎಂಬ 52 ಪುಟದ ಪುಸ್ತಕವನ್ನು ತನ್ನ ರಕ್ತದಿಂದ ಬರೆದಿರುವುದು ವಿಶೇಷವಾಗಿದೆ. ಬೆಂಗಳೂರು ಸೇರಿ ರಾಜ್ಯದಲ್ಲಿ ನೆಲೆಸಿರುವ ಅನ್ಯ ರಾಜ್ಯದವರು ಕನ್ನಡವನ್ನು ಪ್ರೀತಿ ಮಾಡುವಂತಹ ವಾತಾವರಣ ನಿರ್ವಿುಸಬೇಕು. ಈ ನಿಟ್ಟಿನಲ್ಲಿ ಹೋರಾಟ ಮುಂದುವರಿಸುತ್ತೇನೆ ಎಂದು ‘ವಿಜಯವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net