ಬ್ರ್ಯಾಂಡ್ ಬೆಂಗಳೂರು ಅಭಿಯಾನದಡಿ 70 ಸಾವಿರಕ್ಕೂ ಅಧಿಕ ಸಲಹೆಗಳು ಸ್ವೀಕಾರ

Brand Bengaluru
Published on

ಬೆಂಗಳೂರು: ರಾಜಧಾನಿ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ವತಿಯಿಂದ ಆರಂಭವಾಗಿರುವ ‘ಬ್ರ್ಯಾಂಡ್ ಬೆಂಗಳೂರು’ ಅಭಿಯಾನಕ್ಕೆ ಇದುವರೆಗೆ 70 ಸಾವಿರಕ್ಕೂ ಅಧಿಕ ಸಲಹೆಗಳು ಸ್ವೀಕಾರವಾಗಿವೆ.

ಬೆಂಗಳೂರು ಅನ್ನು ಸಂಚಾರಯುಕ್ತ, ಹಸಿರು, ಸ್ವಚ್ಛ, ಜನರಹಿತ, ಆರೋಗ್ಯಕರ, ಟೆಕ್ ಮತ್ತು ಜಲಸುರಕ್ಷಾ ವಿಭಾಗದಲ್ಲಿ ಬದಲಾವಣೆಗೆ ಆರಂಭಿಸಿರುವ ಯೋಜನೆಯಡಿ ನಾಗರಿಕರು, ಸಂಘ ಸಂಸ್ಥೆಗಳು, ಎನ್‌ಜಿಒಗಳು ಹಾಗೂ ಕಂಪನಿಗಳು ಬಗೆ ಬಗೆಯ ಅಭಿಪ್ರಾಯ ಮತ್ತು ಸಲಹೆ ನೀಡಿವೆ. ಡಿಸಿಎಂ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್, ಈ ಎಲ್ಲ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ವರದಿ ನೀಡುವಂತೆ ನೋಡಲ್ ಸಂಸ್ಥೆಗಳಿಗೆ ಹಾಗೂ ಶೈಕ್ಷಣಿಕ ಪಾಲುದಾರರಿಗೆ ಸೂಚಿಸಿದರು.

ಸ್ವಚ್ಚ ಬೆಂಗಳೂರು ವಿಭಾಗ ಸಂಬಂಧ 10,479 ಸಲಹೆಗಳು ಸ್ವೀಕಾರವಾಗಿದೆ. ತ್ಯಾಜ್ಯವನ್ನು ಗೊಬ್ಬರ ಮಾಡುವ ಕುರಿತು ನಾಗರಿಕರಿಗೆ ವಾರ್ಡ್ ಮಟ್ಟದಲ್ಲಿ ತರಬೇತಿ ನೀಡಬೇಕು. ಕಾಂಪೋಸ್ಟಿಂಗ್‌ಗೆ ಅಗತ್ಯವಿರುವ ವಸ್ತುಗಳಿಗೆ ಸಹಾಯಧನ, ಪ್ರೋತ್ಸಾಹ ಒದಗಿಸಬೇಕು. ತ್ಯಾಜ್ಯ ಕೆಲಸಗಾರರು ವಿಷಕಾರಿ ಅಂಶಗಳಿಗೆ ನೇರವಾಗಿ ಒಡ್ಡಿಕೊಳ್ಳುವುದನ್ನು ತಪ್ಪಿಸಲು ಯಾಂತ್ರಿಕೃತ ಉಪಕರಣ ಅಳವಡಿಸಿಕೊಳ್ಳಬೇಕು. ತ್ಯಾಜ್ಯ ನಿರ್ವಹಣೆಯಲ್ಲಿ ಕೆಲಸ ಮಾಡುವ ಎಲ್ಲ ಪೌರಕಾರ್ಮಿಕರಿಗೆ ಕಲ್ಯಾಣ ಪ್ರಯೋಜನಗಳನ್ನು ಒದಗಿಸಬೇಕು. ಕ್ಷೇತ್ರ ಮಟ್ಟದಲ್ಲಿ ತೇವ ತ್ಯಾಜ್ಯ ಸಂಸ್ಕರಿಸಲು ಜೈವಿಕ ಸಿಎನ್‌ಜಿ ಸ್ಥಾವರ ಸ್ಥಾಪಿಸಬೇಕು ಎಂದು ನಾಗರಿಕರು ಸಲಹೆಗಳನ್ನು ನೀಡಿದ್ದಾರೆ.

ಅದೇರೀತಿ, ನಗರದಲ್ಲಿ ಪ್ರವಾಹ ನಿರ್ವಹಣೆಗೆ ವಿಶೇಷ ಯೋಜನೆ ಸಿದ್ಧಪಡಿಸಬೇಕು. ಪ್ರವಾಹದ ಸ್ಥಳಗಳು, ನೀರಿನ ನಿಶ್ಚಲತೆಯಿರುವ ಪ್ರದೇಶಗಳನ್ನು ನಕ್ಷೆ ಮಾಡಲು ಸಮಗ್ರ ಪ್ರಚಾರ ಕೈಗೊಳ್ಳಬೇಕು. ‘ಸ್ಪಾಂಜ್ ಸಿಟಿ’ ವಿಧಾನವನ್ನು ಅಳವಡಿಸಿಕೊಳ್ಳಬೇಕು. ನೀರಿನ ಒಳ ನುಸುಳುವಿಕೆ, ಹರಿವಿನ ನಿಯಂತ್ರಣಕ್ಕಾಗಿ ಜೈವಿಕ ಸ್ವೇಲ್ಸ್, ರೀಚಾರ್ಜ್ ಬಾವಿ, ಜೌಗು ಪ್ರದೇಶಗಳು ಮತ್ತು ಉದ್ಯಾನಗಳಂತಹ ಪ್ರಕೃತಿ ಆಧಾರಿತ ಪರಿಹಾರ ಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಅನೇಕ ಸಂಘ ಸಂಸ್ಥೆಗಳು ಸಲಹೆ ಕೊಟ್ಟಿವೆ. ನೀರುಗಾಲುವೆಗಳಲ್ಲಿ ನಿಯಮಿತವಾಗಿ ಹೂಳು ತೆಗೆಯಬೇಕು. ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಭಾಗಿಯಾಗಲು ಸುಲಭಗೊಳಿಸವ ನಿಟ್ಟಿನಲ್ಲಿ ವಾರ್ಡ್‌ವಾರು ಡಿಜಿಟಲ್ ವೇದಿಕೆ ನಿರ್ಮಾಣ ಮಾಡಬೇಕು. ವಾರ್ಡ್ ಮಟ್ಟದ ಯೋಜನೆಗಳಲ್ಲಿ ಜನರ ಜತೆ ಸಮಾಲೋಚಿಸಬೇಕು. ಸ್ಥಳೀಯ ನಾಯಕರ ಅಭಿವೃದ್ಧಿಗಾಗಿ ಯುವ ಸಮಿತಿ ಒಳಗೊಂಡಂತೆ ವಾರ್ಡ್ ಸಮಿತಿ ರಚಿಸಬೇಕು.ಕಾರ್ಯಕ್ಷಮತೆ ಅಳೆಯಲು, ಸಹಯೋಗದ ಸ್ಪರ್ಧೆ ಪ್ರೋತ್ಸಾಹಿಸಲು ಸ್ಟೇಟ್ ಆ್ ವಾರ್ಡ್ ಮೆಟ್ರಿಕ್ ಅನುಷ್ಠಾನಕ್ಕೆ ತರಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿವೆ.

ಹಸಿರು ಬೆಳೆಸಲು ಪ್ರೋತ್ಸಾಹ ನೀಡಿ: ‘ಬ್ರ್ಯಾಂಡ್ ಬೆಂಗಳೂರು’ ಅಭಿಯಾನದಡಿ ಸಿಲಿಕಾನ್ ಸಿಟಿಯಲ್ಲಿ ಹಸಿರು ವಾತಾವರಣ ನಿರ್ಮಿಸಲು ಹಲವು ಸಲಹೆಗಳು ಬಂದಿವೆ. ನಗರದ ಎಲ್ಲ ವಸತಿ, ವಾಣಿಜ್ಯ ಕಟ್ಟಡಗಳಲ್ಲಿ ಹಸಿರು ಬೆಳೆಸಲು ಆದೇಶ ಹೊರಡಿಸಬೇಕು. ಪ್ರತಿ ಪ್ರದೇಶಗಳ ಮಾತ್ರವಲ್ಲದೆ ವಿಶೇಷವಾಗಿ ಕೊಳೆಗೇರಿ ಮತ್ತು ವಲಸೆ ಸ್ಥಳಗಳಲ್ಲಿ ಸಣ್ಣ ಉದ್ಯಾನ ಸ್ಥಾಪಿಸುವುದಕ್ಕೆ ಹೂಡಿಕೆ ಮಾಡಲು ಪ್ರೋತ್ಸಾಹಿಸಬೇಕು. ವಾಣಿಜ್ಯ ಕಟ್ಟಡಗಳಿಗಾಗಿ ಇಂಧನ ಸಂರಕ್ಷಣೆ ಕಟ್ಟಡ ಸಂಕೇತಗಳಿಗೆ ಒತ್ತು ನೀಡಬೇಕು. ಮುನ್ಸಿಪಲ್ ಪ್ರಾಧಿಕಾರ, ಸ್ಮಾರ್ಟ್ ಸಿಟಿ ಮಿಷನ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಭಿವೃದ್ಧಿಪಡಿಸಲಾದ ಕಾಂಕ್ರೀಟ್ ಕ್ಲೀನ್ ಏರ್ ಆಕ್ಷನ್ ಯೋಜನೆ ಅನುಷ್ಠಾನಕ್ಕೆ ತರಬೇಕು ಎಂದು ಸಲಹೆಗಳು ವ್ಯಕ್ತವಾಗಿವೆ. ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ಅನುಷ್ಠಾನಕ್ಕೆ ತರಬೇಕು. ಸಮೂಹ ಸಾರಿಗೆ ಸೇವೆಗೆ ಒತ್ತು ನೀಡಬೇಕು. ಖಾಸಗಿ ಸಂಸ್ಥೆಗಳಿಂದ ಕಾರ್‌ಪೂಲಿಂಗ್‌ಗೆ ಪ್ರೋತ್ಸಾಹ ನೀಡಬೇಕು. ಪರಿಸರ, ಗಾಳಿಯ ಗುಣಮಟ್ಟ ಮತ್ತು ಜನರ ಆರೋಗ್ಯದ ಮೇಲೆ ವೈಯಕ್ತಿಕ ವಾಹನಗಳ ಬಳಕೆಯಿಂದ ಆಗುವ ಪರಿಣಾಮ ಕುರಿತು ಜಾಗೃತಿ ಮೂಡಿಸಬೇಕು. ಸಾಂಸ್ಥಿಕ ಕಟ್ಟಡ ಹೊರತುಪಡಿಸಿ ರಸ್ತೆಯಲ್ಲಿ ವಾಹನ ನಿಲುಗಡೆ ತಡೆಯಬೇಕು. ವಾಣಿಜ್ಯ ಪ್ರದೇಶದಲ್ಲಿ ಬಹು ಹಂತದ ಪಾರ್ಕಿಂಗ್ ಅಭಿವೃದ್ಧಿಪಡಿಸಬೇಕು. ರಸ್ತೆಗಳಲ್ಲಿ ಮೀಸಲಾದ ಸೈಕ್ಲಿಂಗ್ ಲೇನ್ ಅಭಿವೃದ್ಧಿಪಡಿಸಬೇಕು ಎಂಬ ಬಗ್ಗೆಯೂ ಸಲಹೆಗಳು ಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net