ಕಳ್ಳತನ ಪ್ರಶ್ನಿಸಿದವನನ್ನು ಹೊಡೆದು ಕೊಂದವರಿಗೆ ಜೈಲು

Imprisonment
Published on

ಕಾರವಾರ: ವ್ಯಕ್ತಿಯೊಬ್ಬನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಇಬ್ಬರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಭಟ್ಕಳ ತಾಲೂಕಿನ ಮಾವಳ್ಳಿ ಪಂಚಾಯಿತಿ ವ್ಯಾಪ್ತಿಯ ಈಶ್ವರ ನಾಗಪ್ಪ ನಾಯ್ಕ ಎಂಬಾತನಿಗೆ 7 ವರ್ಷ ಕಠಿಣ ಶಿಕ್ಷೆ ಹಾಗೂ 3 ಲಕ್ಷ ರೂ. ದಂಡ ವಿಧಿಸಲಾಗಿದೆ. ಎರಡನೇ ಆರೋಪಿ ಭರತ ನಾರಾಯಣ ನಾಯ್ಕ ಎಂಬಾತನಿಗೆ 5 ವರ್ಷ ಕಠಿಣ 2 ಲಕ್ಷ ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸದೇ ಇದ್ದಲ್ಲಿ ಇಬ್ಬರೂ ಹೆಚ್ಚುವರಿ ತಲಾ 1 ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಲಾಗಿದೆ.
ಹಿನ್ನೆಲೆ:
2009 ರ ಜೂನ್ 10 ರಂದು ಘಟನೆ ನಡೆದಿದೆ. ಈಶ್ವರ ನಾಗಪ್ಪ ನಾಯ್ಕ ಹಾಗೂ ಭರತ ನಾಯ್ಕ ಎಂಬ ಇಬ್ಬರು ಅಪರಾಧಿಗಳು ತೆಂಗಿನ ಮರ ಹತ್ತಿ ಕಾಯಿಯನ್ನು ಕಳ್ಳತನ ಮಾಡುವುದನ್ನು ನೋಡಿದ್ದ ಶನಿಯಾರ ನಾಯ್ಕ ಎಂಬುವವರು ಆ ಬಗ್ಗೆ ಪ್ರಶ್ನೆ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ಇಬ್ಬರು ಇನ್ನೂ 8 ಜನರ ತಂಡ ಕಟ್ಟಿಕೊಂಡು ಬಂದು ಶನಿಯಾರ ನಾಯ್ಕ ಅವರನ್ನು ಬಡಿಗೆಯಿಂದ ಹೊಡೆದು ಕೊಲೆ ಮಾಡಿದ್ದರು. ಅಲ್ಲದೇ ಅವರ ಪತ್ನಿಯನ್ನು ಗಾಯಗೊಳಿಸಿದ್ದರು.

ಇದನ್ನೂ ಓದಿ:ಸಾರಾಯಿಕುಡಿಯಲು ಹಣ ಕೊಡಲಿಲ್ಲ ಎಂದು ಪತ್ನಿಯನ್ನು ಕಡಿದು ಕೊಂದವನಿಗೆ ಜೀವಾವಧಿ ಶಿಕ್ಷೆ
ಈ ಸಂಬಂಧ ಮುರ್ಡೆಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಪರಾಧಿಗಳನ್ನು ಬಂಧಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ನ್ಯಾಯಾಲಯದಲ್ಲಿ 13 ವರ್ಷ ಸುದೀರ್ಘ ವಿಚಾರಣೆ ನಡೆದಿತ್ತು. 20 ಜನ ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿತ್ತು. 20 ಮುದ್ದೆ ಮಾಲುಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸುಧೀರ್ಘ 167 ಪುಟಗಳ ತೀರ್ಪನ್ನು ಜಿಲ್ಲಾ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಅವರು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕಿ ತನುಜಾ ಹೊಸಪಟ್ಟಣ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net