ಆತ್ಮಹತ್ಯೆಗೆ ಪ್ರಚೋದನೆ ಅಪರಾಧಿಗೆ 7 ವರ್ಷ ಸಜೆ

KKKAAAIIL
Published on

ಕನಕಪುರ: ವಿವಾಹಿತ ಮಹಿಳೆಯೊಂದಿಗೆ ಪ್ರೀತಿಯ ನಾಟಕವಾಡಿ, ಬಳಿಕ ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಗರದ ಖಾಲಕ್‌ನಗರ ನಿವಾಸಿ ಅಸ್ಲಂ (36)ಗೆ ನಗರದ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ, ಆದೇಶಿಸಿದೆ.

ಏನಿದು ಘಟನೆ? : ಖಾಲಕ್ ಬಡಾವಣೆಯ ಅಸ್ಲಂ ಅದೇ ಬಡಾವಣೆಯ ಅನ್ಯಧರ್ಮದ ವಿವಾಹಿತ ಮಹಿಳೆಯೊಂದಿಗೆ ಪ್ರೀತಿಯ ನೆಪದಲ್ಲಿ ಮಾನಸಿಕ ಹಿಂಸೆ ನೀಡುತ್ತಿದ್ದ. ಇದರಿಂದ ಮನನೊಂದ ಮಹಿಳೆ 2017ರ ಏ.7ರಂದು ಮನೆಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಮೃತಳ ತಾಯಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಠಾಣಾಧಿಕಾರಿ ನಟರಾಜ್ ಪ್ರಕರಣ ದಾಖಲಿಸಿಕೊಂಡು, ಅಸ್ಲಂನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ವಿಚಾರಣೆ ವೇಳೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಎಚ್.ಎನ್.ಕುಮಾರ್ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ರೂಪಲಕ್ಷ್ಮೀ ವಕಾಲತು ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net