

ಮಂಡ್ಯ: ವೈದ್ಯರ ನಿರ್ಲಕ್ಷ್ಯಕ್ಕೆ 7 ವರ್ಷದ ಮಗು ಸಾವನ್ನಪ್ಪಿದ ದಾರುಣ ಘಟನೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಸಂಭವಿಸಿದೆ. ಮಗು ಮೃತಪಟ್ಟು 14 ಗಂಟೆಯಾದ್ರೂ ಆಸ್ಪತ್ರೆ ವೈದ್ಯರು ಅಥವಾ ಸಿಬ್ಬಂದಿಗಳಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಇದೀಗ ಪೋಷಕರು ಆಸ್ಪತ್ರೆ ಮುಂದೆ ಧರಣಿ ಕೈಗೊಂಡಿದ್ದಾರೆ.
ಮಗು ಸಾವಿಗೀಡಾಗಿದ್ದರೂ ಸ್ಥಳಕ್ಕೆ ಬಾರದ ಮಿಮ್ಸ್ ನಿರ್ದೇಶಕ ಹಾಗೂ ವೈದ್ಯಕೀಯ ಅಧೀಕ್ಷಕರ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಮಧ್ಯಾಹ್ನ 12 ಗಂಟೆಯಾದ್ರೂ ಅಧಿಕಾರಿಗಳ ಸುಳಿವಿಲ್ಲ ಎಂದು ಆರೋಪಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡದ ಮಂಡ್ಯ ಜಿಲ್ಲಾಧಿಕಾರಿ ವಿರುದ್ಧವೂ ಕಿಡಿ. ಮಗಳ ಸಾವಿಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಿಲ್ಲಿಸದಿರಲು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.
ಮಗಳ ನೆನೆದು ಕಣ್ಣೀರಿಟ್ಟ ತಾಯಿ ರಂಜಿತ, "ಆಪರೇಷನ್ ಆದ ಬಳಿಕ ಮಗಳನ್ನು ಮಾತನಾಡಿಸಿದ್ದೆ. ಮಗಳೇ ಈಗಾಯ್ತಲ್ಲ ಎಂದು ಕಣ್ಣೀರು ಹಾಕಿದ್ದೆ. ನಾನು ಶೀಘ್ರ ಹುಷಾರಾಗಿ ಬರುತ್ತೀನಿ ಅಮ್ಮ ಎಂದು ನನ್ನನ್ನು ಸಮಾಧಾನ ಮಾಡಿದ್ದಳು. ನನ್ನ ಕಣ್ಣೀರು ಒರೆಸಿ, ನಿನ್ನನ್ನು ಚೆನ್ನಾಗಿ ನೋಡ್ಕೊಳ್ತೀನಿ ಅಮ್ಮ ಎಂದಿದ್ದಳು. ಈಗ ನೋಡಿದ್ರೆ ಹೀಗಾಯ್ತು. ನನಗೆ ಒಬ್ಬಳೆ ಮಗಳು ಇದ್ದಿದ್ದು" ಎಂದು ಗೋಳಾಡಿದ್ದಾರೆ.
ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಸಾವಿನ ಪ್ರಕರಣ ಖಂಡಿಸಿರುವ ಪೋಷಕರು ಮತ್ತು ಕುಟುಂಬಸ್ಥರಿಗೆ ಸಾಥ್ ನೀಡಿರುವ ಹಲವು ಸಂಘಟನೆಗಳು, ಮಂಡ್ಯದ ಮಿಮ್ಸ್ ಆಸ್ಪತ್ರೆ ಮುಂಭಾಗ ಪ್ರತಿಭಟನೆಯಲ್ಲಿ ಭಾಗಿಯಾಗಿವೆ. ವೈದ್ಯರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಲಾಗಿದೆ. ಕೂಡಲೇ ಸ್ಥಳಕ್ಕೆ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಆಗಮಿಸುವಂತೆ ಪ್ರತಿಭಟನೆಕಾರರು ಒತ್ತಾಯಿಸಿದ್ದಾರೆ.
ಸ್ಥಳದಲ್ಲೇ ಮಗುವಿಗೆ ಪರಿಹಾರ ಘೋಷಣೆ ಮಾಡಿ ಎಂದು ಆಗ್ರಹಿಸಿದ ಕುಟುಂಬಸ್ಥರಿಗೆ,"ಈ ವೇಳೆ ನಾವು ಪರಿಹಾರ ಕೊಡಲು ಸಾಧ್ಯವಿಲ್ಲ. ವೈದ್ಯರು ಸರಿಯಾದ ಹಾಗೂ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಪ್ರಕರಣದ ತನಿಖೆಯಾಗುತ್ತೆ. ಇದರಲ್ಲಿ ವೈದ್ಯರ ನಿರ್ಲಕ್ಷವಿದ್ದರೇ ಕ್ರಮಕೈಗೊಳ್ಳುತ್ತೇವೆ" ಎಂದ ಮಿಮ್ಸ್ ನಿರ್ದೇಶಕರು ತಿಳಿಸಿದರು.
ಡಾ. ನರಸಿಂಹಮೂರ್ತಿ ಅವರ ಮಾತಿನಿಂದ ಕೆರಳಿದ ಸಾನ್ವಿ ಪೋಷಕರು, "ವೈದ್ಯರ ನಿರ್ಲಕ್ಷದಿಂದಲೇ ಹೀಗಾಗಿದೆ. ನಿಮ್ಮ ಮಕ್ಕಳಿಗೂ ಇದೇ ರೀತಿ ಆಗಿದ್ರೆ, ಸುಮ್ಮನಿರುತ್ತಿದ್ರಾ? ಮಿಮ್ಸ್ ವೈದ್ಯರು ಹೊರಗಡೆ ಕ್ಲಿನಿಕ್ನಲ್ಲಿ ಕೆಲಸ ಮಾಡ್ತಾರೆ. ಒಬ್ಬ ನಿರ್ದೇಶಕರಾಗಿ ನೀವು ತೆಗೆದುಕೊಂಡ ಕ್ರಮವೇನು? ಇನ್ನೆಷ್ಟು ಬಲಿ ಬೇಕು ನಿಮಗೆ?" ಎಂದು ತೀವ್ರ ಕಿಡಿಕಾರಿದ್ದಾರೆ.