ಬೆಳಗಾವಿಯ ಡಿಎಚ್‌ಒ ಕಚೇರಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ 7 ಜನ ಅಮಾನತು

Liquor Party
Published on

ಬೆಳಗಾವಿ: ನಗರದ ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಆವರಣದ ಜಿಲ್ಲಾ ಆರೋಗ್ಯಾಧಿಕಾರಿ ಕಾರ್ಯಾಲಯದ ಹಿಂದಿನ ಕಚೇರಿಯಲ್ಲೇ ಮದ್ಯದ ಪಾರ್ಟಿ ಮಾಡಿದ ಪ್ರಕರಣದಲ್ಲಿ 7 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಡಿಎಚ್‌ಒ ಅವರ ಕಾರು ಚಾಲಕ ಮಂಜುನಾಥ ಪಾಟೀಲ, ಮಹೇಶ ಹಿರೇಮಠ, ರಮೇಶ ನಾಯಿಕ, ಸತ್ಯಪ್ಪ ತಮ್ಮನ್ನವರ, ಅನಿಲ ತಿಪ್ಪನ್ನವರ, ದೀಪಕ ಗಾವಡೆ, ಯಲ್ಲಪ್ಪ ಮುನ್ನವಳ್ಳಿ ಎಂಬ ನೌಕರರನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ಅಮಾನತು ಮಾಡಿ ಬುಧವಾರ ಆದೇಶ ಹೊರಡಿಸಿದ್ದಾರೆ.

ಪಾರ್ಟಿ ಮಾಡಿರುವ ನೌಕರರಲ್ಲೇ ಒಬ್ಬರು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಾಂಧಿ ಜಯಂತಿ ದಿನ ಕಚೇರಿಯಲ್ಲೇ ಗಾಂಧೀಜಿ ಭಾವಚಿತ್ರದ ಎದುರು ಕುಡಿದು ಕುಪ್ಪಳಿಸಿದ್ದಾರೆ. ಹಾಡು, ಡಾನ್ಸ್, ಹರಟೆ ಹೊಡೆದಿದ್ದಾರೆ. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಗಾಂಧಿ ಜಯಂತಿ ದಿನ ಮದ್ಯ, ಮಾಂಸ ಮಾರಾಟ ನಿಷೇಧವಿರುತ್ತದೆ. ಆದರೆ, ಆರೋಗ್ಯ ಇಲಾಖೆ ಸಿಬ್ಬಂದಿ ಪಾರ್ಟಿ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಇಲಾಖೆ ಕಚೇರಿಯಲ್ಲಿ ಏಳು ಜನ ಸಿಬ್ಬಂದಿ ಮದ್ಯ ಸೇವಿಸಿರುವುದು ಕಂಡುಬಂದಿದ್ದು, ಅವರನ್ನು ಅಮಾನತು ಮಾಡಲಾಗಿದೆ. ಆದರೆ, ಗಾಂಧಿ ಜಯಂತಿಗಿಂತ ಮೊದಲು ಈ ಪಾರ್ಟಿ ನಡೆದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net