ರಾಜಧಾನಿಯಲ್ಲಿ ಡೆಂಘೆಯಿಂದ 7 ಮಂದಿ ಮೃತ

dinesh
Published on

ಬೆಂಗಳೂರು: ನಗರದಲ್ಲಿ ಡೆಂಘೆ ಮೇಲ್ವಿಚಾರಣೆಗಾಗಿ ‘ಡೆಂಘೆ ಮೇಲ್ವಿಚಾರಣ ತಂತ್ರಾಂಶ’ ಆ್ಯಪ್ ಅನಾವರಣಗೊಳಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ರಾಜಧಾನಿಯಲ್ಲಿ ಡೆಂಘೆ ತಡೆಯುವುದು ಸೇರಿ ಇತರ ಆರೋಗ್ಯ ವಿಷಯಕ್ಕೆ ಸಂಬಂಧಿಸಿದಂತೆ ಗುರುವಾರ ಪಾಲಿಕೆ ಕೇಂದ್ರ ಕಚೇರಿ ಸಭಾಂಗಣದಲ್ಲಿ ಬಿಬಿಎಂಪಿ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದರು.

ಮುಂಚಿತವಾಗಿ ಡೆಂಘೆ ಬಗ್ಗೆ ತಿಳಿಯುವ ಉದ್ದೇಶದಿಂದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ತಂತ್ರಾಂಶ ಅಭಿವೃದ್ಧಿಪಡಿಸಿದೆ. ಶುಕ್ರವಾರ(ಸೆ.8) ಆ್ಯಪ್‌ಗೆ ಚಾಲನೆ ನೀಡಲಾಗುವುದು. ವಿಶೇಷವಾಗಿ ಡೆಂಘೆ ಮಾತ್ರ ಇದನ್ನು ರಚಿಸಲಾಗಿದೆ. ಆರೋಗ್ಯ ಕಾರ್ಯಕರ್ತರು ಮಾಡುವ ಸರ್ವೇ, ಔಷಧ ಸಿಂಪಡಣೆ ಸೇರಿ ಇತರ ಬಗ್ಗೆಯೂ ಮಾಹಿತಿ ಸಿಗಲಿದೆ. ಇದರಿಂದಾಗಿ ಕೂಡಲೇ ಡೆಂಘೆ ನಿಯಂತ್ರಣಕ್ಕೆ ಅನುಕೂಲವಾಗಲಿದೆ. ಜುಲೈನಲ್ಲಿ 1,649, ಆಗಸ್ಟ್‌ನಲ್ಲಿ 1,589 ಹಾಗೂ ಸೆ.1ರಿಂದ 7ರವರೆಗೆ 416 ಕೇಸ್‌ಗಳು ಪತ್ತೆಯಾಗಿವೆ. ಎಲ್ಲ ವಲಯಗಳಗಿಂತ ಪೂರ್ವ 1200, ದಕ್ಷಿಣ 1,000 ಹಾಗೂ ಮಹದೇವಪುರ 875 ಕೇಸ್‌ಗಳು ದಾಖಲಾಗಿದೆ ಎಂಧು ಸಚಿವರು ಹೇಳಿದರು.

ಮಳೆ ನೀರು ಒಂದೆಡೆ ನಿಂತ ಕಾರಣ ಸೊಳ್ಳೆಗಳ ಲಾರ್ವಾ ಉತ್ಪತ್ತಿ ಆಗಿರುವುದರಿಂದ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ಇದನ್ನು ನಿಯಂತ್ರಣಕ್ಕೆ ಎಲ್ಲ ಕಡೆಗಳಲ್ಲಿ ಔಷಧ ಸಿಂಪಡಣೆ ಸೇರಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರ ಬಗ್ಗೆಯೂ ಆರೋಗ್ಯ ವೈದ್ಯಾಧಿಕಾರಿಗಳು ನಿಗಾ ಇಟ್ಟಿದ್ದಾರೆ. ಈ ತಿಂಗಳಲ್ಲಿ ಡೆಂಘೆ ನಿಯಂತ್ರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಪಾಲಿಕೆಯಲ್ಲಿ ಆರು ಅತ್ಯಾಧುನಿಕ ಪ್ರಯೋಗಾಲಯಗಳಿವೆ. ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆಯನ್ನು ಹೆಚ್ಚಿಸಲಾಗುವುದು. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಮ್ಮ ಕ್ಲಿನಿಕ್‌ಗಳಲ್ಲಿ ಸಂಗ್ರಹ ಮಾಡುವ ರಕ್ತದ ಮಾದರಿಗಳನ್ನು ಲ್ಯಾಬ್ಗಳಿಗೆ ರವಾನೆ ಸೇರಿ ಇತರ ಮೂಲಸೌಕರ್ಯ ಕಲ್ಪಿಸಲು ಅನುದಾನ ಬೇಕಿದೆ. ಈ ವ್ಯವಸ್ಥೆ ತರಲು ತಕ್ಷಣ ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ಅನುದಾನ ಒದಗಿಸಲಾಗುವುದು. ಸಿಬ್ಬಂದಿ ಕೊರತೆ ಬಗೆಹರಿಸಲು ಪಾಲಿಕೆಯಲ್ಲಿ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು ಹಾಗೂ ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯರ ಸಂಖ್ಯೆ ಹೆಚ್ಚಿಸುವ ಜತೆಗೆ ವೇತನ ಏರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆರೋಗ್ಯ ಇಲಾಖೆಯ ಆಯುಕ್ತ ಡಿ.ರಂದೀಪ್, ಪಾಲಿಕೆಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ.ತ್ರಿಲೋಕ್ ಚಂದ್ರ, ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ಮತ್ತಿತತರಿದ್ದರು.

7 ಮಂದಿ ಸಾವು: ಡೆಂಘೆಯಿಂದ 7 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 3 ಮಂದಿ ಡೆಂಘೆಯಿಂದ ಸಾವನ್ನಪ್ಪಿರುವುದು ಖಚಿತವಾಗಿದೆ. ಉಳಿದವರು ಡೆಂಘೆಯಿಂದ ಮೃತಪಟ್ಟಿದ್ದಾರೋ ಅಥವಾ ಇಲ್ಲವೋ ಎಂಬುದರ ಬಗ್ಗೆ ವರದಿ ಬರಬೇಕಿದೆ ಎಂದು ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.

ಬೆಂಗಳೂರು ಹೆಲ್ತ್ ಯೂನಿಟ್: ನಗರದಲ್ಲಿ ಎಲ್ಲ ಆರೋಗ್ಯ ಸೇವೆವನ್ನು ಸಮನಾಂತರವಾಗಿ ತರುವ ಉದ್ದೇಶದಿಂದ ಬಿಬಿಎಂಪಿಯನ್ನು ಪ್ರತ್ಯೇಕ ಜಿಲ್ಲೆ ಎಂದು ಪರಿಗಣಿಸಲು ನಿರ್ಧರಿಸಲಾಗಿದೆ. ಇದರ ಬಗ್ಗೆ ಉನ್ನತ ಮಟ್ಟದಲ್ಲಿ ಅಳವಾಗಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಸಚಿವ ದಿನೇಶ್ ಗುಂಡೂರಾವ್, ಬಿಬಿಎಂಪಿ ವ್ಯಾಪ್ತಿಯಲ್ಲಿ 60 ನಮ್ಮ ಕ್ಲಿನಿಕ್‌ಗಳು ಪ್ರತಿ ನಿತ್ಯ ಬೆಳಗ್ಗೆ 8ರಿಂದ ರಾತ್ರಿ 8 ಗಂಟೆವರೆಗೆ ಕಾರ್ಯನಿರ್ವಹಿಸಲಿದೆ. ಈ ಸಮಯದಲ್ಲಿ ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಲ್ಯಾಬ್ ಟೆಕ್ನಿಷಿಯನ್‌ಗಳು ಹಾಗೂ ಮಧ್ಯಾಹ್ನ 12ರಿಂದ ರಾತ್ರಿ 8 ಗಂಟೆವರೆಗೆ ವೈದ್ಯರು, ನರ್ಸ್‌ಗಳ ಇರಲಿದ್ದಾರೆ ಎಂದರು.

ಡೆಂಘೆ ಲಕ್ಷಣಗಳು

ಜ್ವರ, ತಲೆನೋವು, ಶೀತ, ಗಂಟಲು ನೋವು, ವಾಂತಿ, ಹೊಟ್ಟೆ ನೋವು, ಮೈ ಕೈ ನೋವು, ಅತಿಸಾರ, ಹೃದಯ ಬಡಿತ ಹೆಚ್ಚಾಗುವುದು, ಮೈಮೇಲೆ ಅಲರ್ಜಿ ರೀತಿಯಲ್ಲಿ ಗುಳ್ಳೆ.

ಎಚ್ಚರಿಕೆ ವಹಿಸಿ:

* ಸೊಳ್ಳೆಗಳ ನಿಯಂತ್ರಣ

* ಹಗಲಿನಲ್ಲಿ ಸೊಳ್ಳೆ ಕಚ್ಚದಂತೆ ಎಚ್ಚರವಹಿಸಿ

* ಶುದ್ಧ ಹಾಗೂ ಕುದಿಸಿ ಆರಿಸಿದ ನೀರು ಕುಡಿಯಿರಿ

* ನೀರು ಶೇಖರಣಾ ತೊಟ್ಟಿ, ಟ್ಯಾಂಕ್‌ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಿ

* ಮನೆಯ ಸುತ್ತಮುತ್ತ ಮತ್ತು ತಾರಸಿಯ ಮೇಲೆ ನೀರು ನಿಲ್ಲದಂತೆ ನೋಡಿಕೊಳ್ಳಿ

* ತೆಂಗಿನ ಚಿಪ್ಪು, ಟಯರ್, ಬಾಟಲಿಗಳಂತಹ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿಗೊಳಿಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net