ಶಿಡ್ಲಘಟ್ಟ: ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ವೇಳೆ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ ದೂರಿನ ಮೇರೆಗೆ ಕಾಂಗ್ರೆಸ್‌ನ ಏಳು ಸದಸ್ಯರಿಗೆ ಜಿಲ್ಲಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ನಗರಸಭೆ ಸದಸ್ಯ ಎಂ. ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಸದಸ್ಯರಾದ ಎಸ್. ಚಿತ್ರಾ ಮನೋಹರ್, ಎಸ್.ಎಂ. ಮಂಜುನಾಥ್, ಅನಿಲ್‌ಕುಮಾರ್, ಎನ್.ಕೃಷ್ಣಮೂರ್ತಿ, ಟಿ.ಮಂಜುನಾಥ್, ಜಬೀವುಲ್ಲಾ ಹಾಗೂ ಶಿವಮ್ಮ ಮುನಿರಾಜು ಅವರಿಗೆ ಪಕ್ಷದ ವಿಪ್ ಉಲ್ಲಂಘನೆ ಮಾಡಿರುವ ಬಗ್ಗೆ ನೋಟಿಸ್ ಜಾರಿ ಮಾಡಲಾಗಿದೆ.
ಸೆಪ್ಟೆಂಬರ್ 5ರಂದು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದಿತ್ತು. ಕಾಂಗ್ರೆಸ್‌ನ 13, ಜೆಡಿಎಸ್‌ನ 10, ಬಿಜೆಪಿ ಹಾಗೂ ಬಿಎಸ್‌ಪಿ ಪಕ್ಷದ ತಲಾ ಇಬ್ಬರು ಮತ್ತು 4 ಸ್ವತಂತ್ರ್ಯ ಅಭ್ಯರ್ಥಿಗಳು ಸದಸ್ಯರಿದ್ದರು.
ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರಿಗೆ ವಿಪ್ ಜಾರಿ ಮಾಡಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಕೈ ಸದಸ್ಯರಿದ್ದರೂ ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್ಸಿಗರು ವಿಫಲರಾಗಿದ್ದರು. ಜೆಡಿಎಸ್‌ನ ವೆಂಕಟಸ್ವಾಮಿ, ರೂಪಾ ನವೀನ್ ಆಯ್ಕೆ ಆಗಿದ್ದರು. ಈ ಹಿನ್ನೆಲೆಯಲ್ಲಿ ವಿಪ್ ಉಲ್ಲಂಘನೆ ಮಾಡಿದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ದೂರು ನೀಡಲಾಗಿತ್ತು. ಇದರ ಆಧಾರದಲ್ಲಿ 7 ಕಾಂಗ್ರೆಸ್ ಸದಸ್ಯರಿಗೆ ನೋಟಿಸ್ ಜಾರಿಯಾಗಿದೆ.
ಅಕ್ಟೋಬರ್ 30ರಂದು ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ನಡೆಯುವ ವಿಚಾರಣೆಗೆ ಖುದ್ದು ಅಥವಾ ವಕೀಲರ ಮೂಲಕ ಅಗತ್ಯ ದಾಖಲಾತಿ, ಸಾಕ್ಷಾೃಧಾರಗಳೊಂದಿಗೆ ಹಾಜರಾಗಬೇಕು. ತಪ್ಪಿದಲ್ಲಿ ನಿಮ್ಮ ಹೇಳಿಕೆ ಇಲ್ಲವೆಂದು ಪರಿಗಣಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.