

ಹಾಸನ: ಭಾರತದಲ್ಲಿ ವರ್ಷಕ್ಕೆ ಅಂದಾಜು 7 ಲಕ್ಷ ಜನ ಹೃದಯಾಘಾತಕ್ಕೆ ಒಳಗಾಗುತ್ತಿದ್ದು, ಈ ಪೈಕಿ 2.3 ಲಕ್ಷ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಹೃದ್ರೋಗ ತಜ್ಞ ಡಾ.ಕೆ.ಆರ್.ಶರೀಫ್ ತಿಳಿಸಿದರು.
ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಾಲೇಜಿನ ಎನ್‌ಎಸ್‌ಎಸ್ ಘಟಕ, ಹಳೇ ವಿದ್ಯಾರ್ಥಿಗಳ ಪರಹಿತ ಘಟಕ ಹಾಗೂ ರೋಟರಿ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಹೃದಯ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಹೃದಯಾಘಾತಕ್ಕೆ ಒಳಗಾಗುವ ಮೂವರಲ್ಲಿ ಒಬ್ಬರು ಚಿಕಿತ್ಸೆಗೆಂದು ಆಸ್ಪತ್ರೆ ತಲುಪುವ ಮೊದಲೇ ಸಾವಿಗೀಡಾಗುತ್ತಿದ್ದಾರೆ. ಸಿಪಿಆರ್ ಎಂದು ಕರೆಯಲಾಗುವ ಹೃದಯ ಪುನರುಜ್ಜೀವನ ವಿಧಾನ ಹೃದಯಾಘಾತಕ್ಕೆ ಒಳಗಾಗುವ ವ್ಯಕ್ತಿಯ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಬಗ್ಗೆ ವಿದ್ಯಾರ್ಥಿಗಳನ್ನೂ ಒಳಗೊಂಡಂತೆ ಎಲ್ಲರೂ ತಿಳಿದಿರಬೇಕಾದುದು ಅತ್ಯಗತ್ಯ ಎಂದು ಹೇಳಿದರು.
ಆಗ್ನೇಯ ಏಷ್ಯಾ ಭಾಗದ ಜನರು ಹೃದಯಾಘಾತಕ್ಕೆ ಒಳಗಾಗಬಹುದಾದ ಸಾಧ್ಯತೆ ಹೆಚ್ಚು. ಈ ಭಾಗದ ಜನರು ಜಗತ್ತಿನ ಇತರೆಡೆಗಳಲ್ಲಿನವರಿಗಿಂತ 5-10 ವರ್ಷಗಳಷ್ಟು ಕಡಿಮೆ ವಯೋಮಾನದಲ್ಲಿಯೇ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಪುರುಷರಲ್ಲಿ ಹೃದಯಾಘಾತ ಪ್ರಮಾಣ ಹೆಚ್ಚು. ಅತಿಯಾದ ಮದ್ಯಪಾನ, ಧೂಮಪಾನ, ಅನಾರೋಗ್ಯಕರ ಜೀವನಶೈಲಿ ಇದಕ್ಕೆ ಕಾರಣ. ಇತ್ತೀಚಿನ ದಿನಗಳಲ್ಲಿ ಗಾಮೀಣ ಪ್ರದೇಶದ ಜನರು ಸಹ ಹೃದ್ರೋಗ ಪ್ರಮಾಣ ಹೆಚ್ಚುತ್ತಿದೆ ಎಂದು ತಿಳಿಸಿದರು.
ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಇದ್ದರೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಅದನ್ನು ತಡೆಯಲು ನಿಯಮಿತವಾಗಿ ಹೃದಯ ತಪಾಸಣೆಗೆ ಒಳಗಾಗುವುದು ಸೂಕ್ತವೆಂದು ಸಲಹೆ ನೀಡಿದರು.
ಹೋಟೆಲ್ ಊಟದ ಮೇಲಿನ ಅತಿಯಾದ ಅವಲಂಬನೆಯೂ ಹೃದಯಾಘಾತಕ್ಕೆ ಕಾರಣವಾಗುತ್ತಿದೆ. ರುಚಿಗಾಗಿ ಬಳಸುವ ವಸ್ತುಗಳು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಕೊಲೆಸ್ಟ್ರಾಲ್ ದೇಹಕ್ಕೆ ಒಳ್ಳೆಯದಲ್ಲ. ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ ಕೊಲೆಸ್ಟ್ರಾಲ್ ಅನ್ನು ಒಳ್ಳೆಯ ಕೊಲೆಸ್ಟ್ರಾಲ್ ಎನ್ನಲಾಗುತ್ತದೆ. ನಿಯಮಿತ ವ್ಯಾಯಾಮ ಹಾಗೂ ಆರೋಗ್ಯಕರ ಜೀವನಶೈಲಿಯಿಂದ ಒಳ್ಳೆಯ ಕೊಲೆಸ್ಟ್ರಾಲ್ ಪಡೆಯಬಹುದು ಎಂದು ವಿವರಿಸಿದರು.
ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದ ಅಧಿಕಾರಿ ವಿಜಯ್ ಕುಮಾರ್ ತಿಲೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಹೃದಯಾಘಾತ ಮತ್ತು ಹೃದಯ ಸಂಬಂಧಿ ರೋಗಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾಲೇಜಿನ ಹಳೇ ವಿದ್ಯಾರ್ಥಿ ಮೋಹನ್, ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ವನಿತಾ, ಮಂಜುನಾಥ್, ಪ್ರಸನ್ನ, ಭವ್ಯಾ, ನಳಿನಿ, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.