

ಸಾಲಿಗ್ರಾಮ: ರಸ್ತೆ, ಚರಂಡಿ ಮತ್ತು ಶಾಲೆ ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗೆ ಸುಮಾರು 7 ಕೋಟಿ ರೂ. ಅನುದಾನವನ್ನು ಕಾಳಮ್ಮನಕೊಪ್ಪಲು ಗ್ರಾಮಕ್ಕೆ ನೀಡಿದ್ದೇನೆ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.
ಗ್ರಾಮದಲ್ಲಿ ಕೆಸಿಸಿ ಕ್ರಿಕೆಟ್ ಕ್ಲಬ್ ವತಿಯಿಂದ ಆಯೋಜಿಸಿದ 5ನೇ ವರ್ಷದ ರವಿಶಂಕರ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಆರೋಗ್ಯದ ಹಿತದೃಷ್ಟಿಯಿಂದ ಆಟೋಟ ಸ್ಪರ್ಧೆಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ ಬಿಡುವಿನ ಸಂದರ್ಭದಲ್ಲಿ ಆಟೋಟ ಸ್ಪರ್ಧೆಗೆ ಸಮಯ ನಿಗದಿ ಮಾಡಿಕೊಳ್ಳಬೇಕು ಎಂದು ಯುವಕರಿಗೆ ಸಲಹೆ ನೀಡಿದರು.
ಸಾಲಿಗ್ರಾಮ- ಹರದನಹಳ್ಳಿ ಮುಖ್ಯ ರಸ್ತೆಯಿಂದ ಕಾಳಮ್ಮನ ಕೊಪ್ಪಲು ಮತ್ತು ಸಾಲಕೊಪ್ಪಲು ಶೀಗೆವಾಳು ಮನಗನಹಳ್ಳಿ ರಸ್ತೆ ಹಲವು ವರ್ಷಗಳಿಂದ ಗುಂಡಿಗಳಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿತ್ತು. ಜನ ಆಶೀರ್ವಾದ ಕಾರ್ಯಕ್ರಮದಲ್ಲಿ ಜನರು ನನ್ನ ಗಮನಕ್ಕೆ ತಂದಿದ್ದರು. ಹಾಗಾಗಿ ರಸ್ತೆಗಳ ಅಭಿವೃದ್ಧಿಗೆ ಸುಮಾರು 6.50 ಕೋಟಿ ರೂ. ಅನುದಾನ ನೀಡಿದ್ದೇನೆ ಎಂದರು.
ಕೆ-ಶಿಪ್ ಅಧಿಕಾರಿಗಳ ನಿರ್ಲಕ್ಷೃದಿಂದ ಕಾಳಮ್ಮನ ಕೊಪ್ಪಲು ಗ್ರಾಮಕ್ಕೆ ಬರುವ ಮುಖ್ಯ ರಸ್ತೆಯ ಬೋರ್ಡ್ ತಪ್ಪಾಗಿ ನಮೂದಿಸಿದ್ದಾರೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿ ಜತೆಗೆ ಮಾತನಾಡಿದ್ದೇನೆ. ಶೀಘ್ರದಲ್ಲೇ ಕಾಳಮ್ಮನ ಕೊಪ್ಪಲು ಎಂದು ಬೋರ್ಡ್ ಅಳವಡಿಸಿ ಎಂದಿದ್ದೇನೆ. ಜತೆಗೆ ಮೈಸೂರಿನಿಂದ ಬರುವ ತಡೆರಹಿತ ಬಸ್ಸೊಂದನ್ನು ಕಾಳಮ್ಮನ ಕೊಪ್ಪಲಿನಲ್ಲಿ ತಂಗುವ ವ್ಯವಸ್ಥೆ ಮಾಡಿ ಈ ಭಾಗದ ಜನರಿಗೆ ಮೈಸೂರಿಗೆ ಹೋಗಲು ಅನುಕೂಲವಾಗುತ್ತದೆ ಎಂದು ಡಿಪೋ ಮ್ಯಾನೇಜರ್ ಜತೆ ಮಾತನಾಡಿದ್ದೇನೆ ಎಂದರು.
ಕ್ರಿಕೆಟ್‌ನಲ್ಲಿ ವಿಜೇತ ತಂಡಗಳಿಗೆ ಶಾಸಕ ಡಿ.ರವಿಶಂಕರ್ ಕಪ್ ವಿತರಿಸಿದರು. ನಂತರ ಕೆಸಿಸಿ ಕ್ರಿಕೆಟ್ ಕ್ಲಬ್ ವತಿಯಿಂದ ಶಾಸಕ ಡಿ. ರವಿಶಂಕರ್ ಅವರನ್ನು ಅಭಿನಂದಿಸಲಾಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೃಷ್ಣೇಗೌಡ, ಗ್ರಾಪಂ ಸದಸ್ಯ ಡಿ ಕೃಷ್ಣ, ಮಾಜಿ ಉಪಾಧ್ಯಕ್ಷೆ ಕೋಮಲಾಚಾರಿ, ಸಿಡಿಸಿ ಸದಸ್ಯ ಮಹದೇವ್, ಮುಖಂಡರಾದ ಜವರಪ್ಪ, ಕಿರಣ್, ವೆಂಕಟೇಶ್, ಗುರು, ಚಂದ್ರ, ದೇವರಾಜ್, ಗಾರೆರಾಜೇಗೌಡ, ಬಿಳಿಯಪ್ಪ, ಮರಿಗೌಡ ಇತರರು ಇದ್ದರು.