

ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ: ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮ ಪಂಚಾಯಿತಿ, ರಸ್ತೆ ಪಕ್ಕದ ನಿವಾಸಿಗಳು ಅಸಹಕಾರ ತೋರುತ್ತಿರುವ ಕಾರಣ ಹೊಸದುರ್ಗ- ದಾವಣಗೆರೆ ಮುಖ್ಯರಸ್ತೆ ನಿರ್ಮಾಣ ನನ್ನ ಕೈಲಾಗದು ಎಂದು ಗುತ್ತಿಗೆದಾರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
1400 ಮೀಟರ್ ಉದ್ದದ ರಸ್ತೆ ಅಭಿವೃದ್ಧಿಗೆ 7.50 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಆದರೆ ರಸ್ತೆ ಬದಿಯ ಮನೆಗಳನ್ನು ತೆರವುಗೊಳಿಸಲು ಯಾರೂ ಸಹಕಾರ ನೀಡದ ಕಾರಣ ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದು ಕೈಚೆಲ್ಲಿದ್ದಾರೆ.
ಆದಕಾರಣ ಮಾಯಕೊಂಡದಲ್ಲಿ ಹಾದು ಹೋದ ಹೊಸದುರ್ಗ-ದಾವಣಗೆರೆ ಜಿಲ್ಲಾ ಮುಖ್ಯ ರಸ್ತೆ ವಿಸ್ತರಣೆ ಕಾಮಗಾರಿ ಕಳೆದ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ವ್ಯತ್ಯಯವಾಗಿದೆ.
ದಾವಣಗೆರೆಯಿಂದ ವಯಾ ಆನಗೋಡು, ಮಾಯಕೊಂಡ, ಸಾಸಲು ಹಳ್ಳ, ಚಿಕ್ಕಜಾಜೂರು, ಹೊಳಲ್ಕೆರೆ, ಹೊಸದುರ್ಗಕ್ಕೆ ಪ್ರತಿನಿತ್ಯ 50 ಬಸ್ಗಳು 100ಕ್ಕೂ ಹೆಚ್ಚು ಇತರೆ ವಾಹನಗಳು ಸಂಚರಿಸುತ್ತವೆ. ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ್ದ ಆಗಿನ ಶಾಸಕ ಪ್ರೊ.ಎನ್. ಲಿಂಗಣ್ಣ ರಸ್ತೆ ವಿಸ್ತರಣೆ ಹಾಗೂ ದ್ವಿಪಥ ರಸ್ತೆ ನಿರ್ವಣಕ್ಕೆ ಅನುದಾನ ನೀಡಿದ್ದರು. ಕಾಮಗಾರಿ ಸ್ಥಿತಿ ಗಮನಿಸಿದರೆ ಸದ್ಯಕ್ಕಂತೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.
ಅಭಿವೃದ್ಧಿಗೆ ಅಡ್ಡಿಯಾದ ರಸ್ತೆ ಪಕ್ಕದ ಮನೆ: ರಸ್ತೆ ಪಕ್ಕದ ಮನೆಗಳನ್ನು ತೆರವುಗೊಳಿಸಲು ಜನಪ್ರತಿನಿಧಿಗಳು ಸೇರಿ ಯಾರೂ ಸಹಕಾರ ನೀಡದ ಕಾರಣ ಕಳೆದ ಒಂದು ವರ್ಷದ ಹಿಂದೆಯೇ ಕಾಮಗಾರಿ ಮುಂದುವರಿಸಲು ಸಾಧ್ಯವಿಲ್ಲವೆಂದು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದು ಸಗುತ್ತಿಗೆದಾರ ಎನ್ಎಚ್ಎನ್ ಕಂಪನಿಯ ಮಾಲೀಕ ಹನುಮಂತ ನಾಯ್್ಕ ತಿಳಿಸಿದ್ದಾರೆ.
ವೆಚ್ಚದಾಯಕ ಕಾಮಗಾರಿ: ರಸ್ತೆ ವಿಸ್ತರಣೆಗೆ 2020ರ ಫೆಬ್ರವರಿಯಲ್ಲಿ ಆಗಿನ ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕ ಪ್ರೊ.ಎನ್. ಲಿಂಗಣ್ಣ ಗುದ್ದಲಿ ಪೂಜೆ ನೆರವೇರಿಸಿದ್ದರು. ಒಟ್ಟು 7.50 ಕೋಟಿ ರೂ. ವೆಚ್ಚದ ಕಾಮಗಾರಿ ಇದಾಗಿದ್ದು, ಉತ್ತಮ ರಸ್ತೆ ನಿರ್ವಣವಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಗ್ರಾಮಸ್ಥರು ಕಾಯುವಂತಾಗಿದೆ.
ಕಾಮಗಾರಿ ನಡೆಯುತ್ತಿರುವ ಮುಖ್ಯರಸ್ತೆಯ ಪಕ್ಕ ಸುಮಾರು 13 ರಿಂದ 14 ಮನೆಗಳಿವೆ. ಯಾರಿಗೂ ಬೇರೆಡೆ ಖಾಲಿ ನಿವೇಶನಗಳಿಲ್ಲ. ಕೆಲಸದ ವೇಳೆ ಮನೆಯ ಅರ್ಧಕ್ಕಿಂತ ಹೆಚ್ಚು ಭಾಗ ಹೋಗಲಿದೆ.ಸರ್ಕಾರ ಅವರಿಗೆ ತುರ್ತಾಗಿ ಬೇರೆಡೆ ನಿವೇಶನ ಹಾಗೂ ವಸತಿ ಕಲ್ಪಿಸಬೇಕು. | ಶಿವಮ್ಮ ಮಲ್ಲಿಕಾರ್ಜುನ್, ಗ್ರಾಪಂ ಉಪಾಧ್ಯಕ್ಷೆ, ಮಾಯಕೊಂಡ. ಮಾಯಕೊಂಡ ಶಾಸಕನಾಗಿ ಆಯ್ಕೆಯಾದ ವೇಳೆ ಗ್ರಾಮದ ಮುಖ್ಯರಸ್ತೆ ಅಭಿವೃದ್ಧಿಗೆ 7.50 ಕೋಟಿ ರೂ. ಅನುದಾನ ನೀಡಿದ್ದೆ. 5 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಈಗಿನ ಶಾಸಕರು, ಅಧಿಕಾರಿಗಳು ಉತ್ತಮ ರಸ್ತೆ ನಿರ್ವಿುಸಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. | ಪ್ರೊ.ಎನ್. ಲಿಂಗಣ್ಣ, ಮಾಜಿ ಶಾಸಕರು ಮುಖ್ಯ ರಸ್ತೆಯ ಅಭಿವೃದ್ದಿ ಕಾಮಗಾರಿ ವಿಳಂಬವಾಗಿರುವುದು ನಿಜ. ಒಂದೆರಡು ತಿಂಗಳಲ್ಲಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಈಗಾಗಲೇ ಸೂಚಿಸಿದ್ದೇನೆ. ರಸ್ತೆ ಪಕ್ಕ ಮನೆಗಳಲ್ಲಿ ವಾಸಿಸುವವರು ರಸ್ತೆ ವಿಸ್ತರಣೆಗೆ ಸಹಕರಿಸಬೇಕು. | ಕೆ.ಎಸ್. ಬಸವಂತಪ್ಪ, ಶಾಸಕರು ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ.ರಸ್ತೆ ಬದಿಗಳಲ್ಲಿ ನಿರ್ವಿುಸಿರುವ ಚರಂಡಿ ಮೇಲೆ ಸಂಪೂರ್ಣ ಕಾಂಕ್ರಿಟ್ ಹೊದಿಕೆ ಹಾಕಿಲ್ಲ. ದನ- ಕರುಗಳು ಚರಂಡಿಗಳಿಗೆ ಬಿದ್ದು ಕಾಲು ಮುರಿದುಕೊಂಡಿವೆ. ಇಂತಹ ಅನಾಹುತ ತಡೆಯಬೇಕು. | ಗೌಡ್ರ ಅಶೋಕ್, ರೈತ ಸಂಘದ ತಾಲೂಕು ಅಧ್ಯಕ್ಷರು ಮಾಯಕೊಂಡ.