ಮಹಾರಾಣಿ ಕ್ಲಸ್ಟರ್ ವಿವಿಯಿಂದ ವರ್ಗಾವಣೆ ಬಯಸಿದ 62 ಪ್ರಾಧ್ಯಾಪಕರು!

City 9 Maharani College
Published on

ಬೆಂಗಳೂರು: ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿರುವ ಪ್ರಾಧ್ಯಾಪಕರನ್ನು ಕೂಡ ವರ್ಗಾವಣೆಗೆ ಒಳಪಡಿಸಬೇಕೆಂಬ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಕಾಲೇಜು ಪ್ರಾದ್ಯಾಪಕರ ಒತ್ತಾಯದ ನಡುವೆಯೇ ಮಹಾರಾಣಿ ಕ್ಲಸ್ಟರ್‌ನಲ್ಲಿರುವ 62 ಪ್ರಾಧ್ಯಾಪಕರು ಬೇರೊಂದು ಕಡೆ ವರ್ಗಾವಣೆ ಕೇಳಿದ್ದಾರೆಂಬ ಆಶ್ಚರ್ಯಕರ ಸಂಗತಿ ತಿಳಿದುಬಂದಿದೆ.

ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯವಾಗಿರುವ ಕಾರಣ ವಿಶ್ವವಿದ್ಯಾಲಯಕ್ಕೆ ವರ್ಗಾವಣೆಗೊಂಡಿರುವ ಪ್ರಾಧ್ಯಾಪಕರು ಬೇರೊಂದು ಕಾಲೇಜುಗಳಿಗೆ ವರ್ಗಾವಣೆಯಾಗಲು ಬಯಸುತ್ತಿಲ್ಲ. ಒಂದು ವೇಳೆ ಕೇಳಿದರೂ ನಾವು ವಿಶ್ವವಿದ್ಯಾಲಯವಾಗಿರುವ ಕಾರಣ ಬೇರೊಂದು ಕಡೆ ಹೋಗಲು ಕಾನೂನಿನಲ್ಲಿ ಅವಕಾಶವಿಲ್ಲವೆಂಬ ನೆಪ ಹೇಳಿ ಮಹಾರಾಣಿ ಕಾಲೇಜಿನಲ್ಲಿಯೇ ತಳವೂರಿದ್ದಾರೆ.

ವಿಶ್ವವಿದ್ಯಾಲಯ ಆರಂಭಕ್ಕೆ ಅಧಿಸೂಚನೆ ಹೊರಡಿಸಿ 10 ವರ್ಷಗಳಾಗಿದ್ದು, ಕಳೆದ ಒಂದು ದಶಕದಲ್ಲಿ ಇದೇ ಹೈಡ್ರಾಮಾ ನಡೆಯುತ್ತಿದೆ. ಈ ನಡುವೆ ಕೆಲವರು ಸೇವಾ ನಿವೃತ್ತರಾಗಿಯೂ ನಿರ್ಗಮಿಸಿದ್ದಾರೆ.

ಪ್ರಸ್ತುತ ವಿವಿಯಲ್ಲಿ 195 ಪ್ರಾಧ್ಯಾಪಕರು/ಸಹ ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವರ್ಗಾವಣೆ ವಿಚಾರ ತಾರಕ್ಕೇರಿರುವ ನಡುವೆಯೇ 62 ಮಂದಿ ಇತ್ತೀಚೆಗೆ ಉನ್ನತ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್:

ಮಹಾರಾಣಿ ಕಾಲೇಜಿನ ವರ್ಗಾವಣೆ ವಿಚಾರವನ್ನು ಹೈಕೋರ್ಟ್ ಕೂಡ ಗಂಭೀರವಾಗಿ ಪರಿಗಣಿಸಿತ್ತು. ಕೇವಲ ವರ್ಗಾವಣೆ ಸಮಯದಲ್ಲಿ ಮಾತ್ರ ಏಕೆ ನೀವು ವಿಶ್ವವಿದ್ಯಾಲಯವನ್ನು ಪರಿಗಣಿಸುತ್ತೀರಿ? ಬಡ್ತಿ,. ವೇತನವನ್ನು ಯಾವ ಇಲಾಖೆ ನೀಡುತ್ತಿದೆ ಎಂಬುದು ಕೂಡ ಮುಖ್ಯವಾಗಲಿದೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದರೆ, ವೇತವ ಮತ್ತು ಬಡ್ತಿಯನ್ನು ಕೂಡ ವಿಶ್ವವಿದ್ಯಾಲಯವೇ ಭರಿಸಬೇಕು ಅಲ್ಲವೇ ಎಂದು ಪ್ರಶ್ನಿಸಿತ್ತು.

ಈ ಎಲ್ಲ ಕಾರಣಗಳಿಂದ ಕೆಲವರು ವಿಶ್ವವಿದ್ಯಾಲಯದಿಂದ ಹೊರಬರಲು ನಿರ್ಧರಿಸಿದ್ದಾರೆ. ಮತ್ತೆ ಕೆಲವರು ಆರಂಭದಿಂದಲೂ ಬೇರೊಂದು ಊರಿಗೆ ಅಥವಾ ತಂತಮ್ಮ ಜಿಲ್ಲೆಗಳಿಗೆ ಹೋಗಲು ಇಚ್ಚಿಸುವವರು ವರ್ಗಾವಣೆ ಕೇಳುತ್ತಿದ್ದಾರೆ. ಆದರೆ, ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರಿದ್ದೀರೆಂದು ವರ್ಗಾವಣೆ ನೀಡುತ್ತಿರಲಿಲ್ಲ.

ನಿವೃತ್ತಿ ವಯಸ್ಸು 62 ಇರುವುದೂ ಕಾರಣ

ಕಾಲೇಜು ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ ಪದವಿ ಕಾಲೇಜುಗಳಲ್ಲಿ 60 ವರ್ಷಕ್ಕೆ ನಿವೃತ್ತಿಯಾಗುತ್ತಾರೆ. ಅದೇ ವಿಶ್ವವಿದ್ಯಾಲಯಗಳಲ್ಲಿ ಬೋಧನೆ ಮಾಡುವವರಿಗೆ 62 ವಯಸ್ಸಿನವರೆಗೆ ಅವಕಾಶವಿದೆ. ಮಹಾರಾಣಿ ಕಾಲೇಜು ನಗರದ ಹೃದಯಭಾಗದಲ್ಲಿ ಇರುವುದುರಿಂದ ಬೇರೊಂದು ಕಡೆ ಹೋಗಲು ಪ್ರಾಧ್ಯಾಪಕರು ಮನಸ್ಸು ಮಾಡುವದಿಲ್ಲ. ಆದರೆ, ಕೆಲವು ಪ್ರಾಧ್ಯಾಪಕರು ಉತ್ತರ ಕರ್ನಾಟಕ ಸೇರಿ ಹಲವು ಜಿಲ್ಲೆಯವರು ಬೆಂಗಳೂರಿನಿಂದ ಹೊರಗೆ ಹೋಗಲು ನಿರ್ಧರಿಸುವವರು ವರ್ಗಾವಣೆ ಬಯಸಿದ್ದಾರೆಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net