ಸೆ.7ರಿಂದ 11ರವರೆಗೆ ಮೂಡುಬಿದಿರೆ ಗಣೇಶೋತ್ಸವ: ವಿವಿಧ ಆಟೋಟ, ಪ್ರತಿಭಾ ಸ್ಪರ್ಧೆ

mbd_Ganesha
Published on

ಮೂಡುಬಿದಿರೆ: ಸೆ.7ರಿಂದ ಸೆ.11ರ ವರೆಗೆ ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸಮಾಜ ಮಂದಿರದಲ್ಲಿ 61ನೇ ವರ್ಷದ ಮೂಡುಬಿದಿರೆ ಗಣೇಶೋತ್ಸವ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಕೆ.ಶ್ರೀಪತಿ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೆ.7ರಂದು ಬೆಳಗ್ಗೆ 10 ಗಂಟೆಗೆ ಅಲಂಗಾರು ವೇ.ಮೂ.ಈಶ್ವರ ಭಟ್ ಅವರು ವಿಗ್ರಹ ಪ್ರತಿಷ್ಠಾಪನೆ ಮಾಡಲಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ದೀಪ ಪ್ರಜ್ವಲನೆಗೊಳಿಸಲಿದ್ದಾರೆ. ಸೆ.8 ಮತ್ತು 10ರಂದು ವಿಶೇಷ ಮುಡಿ ಅಪ್ಪ ಸೇವೆ ನಡೆಯಲಿದೆ. ಸೆ.9ರಂದು ಬೆಳಗ್ಗೆ ಅಥರ್ವಶೀರ್ಷ ಗಣಪತಿ ಯಾಗ ನಡೆಯಲಿದೆ. ಪ್ರತಿದಿನ ಸಂಜೆ 7.30ಕ್ಕೆ ಮೂಡುಗಣಪತಿ ಸೇವೆ, ಪ್ರತಿದಿನ ಮಧ್ಯಾಹ್ನ 12.30 ಹಾಗೂ ರಾತ್ರಿ 8.45ಕ್ಕೆ ಮಹಾಪೂಜೆ ನಡೆಯಲಿದೆ. ಪ್ರತಿದಿನ ರಾತ್ರಿ 8ಕ್ಕೆ ರಂಗಪೂಜೆ ಹಾಗೂ ಭಜನೆ ನಡೆಯಲಿದ್ದು, ಪ್ರತಿದಿನ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದರು.

ಸೆ.7ರಂದು ಸಂಜೆ 5ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಟಾಪ್ ಎಂಟರ್‌ಟೈರ್ಸ್‌ ಅಕಾಡೆಮಿ ವತಿಯಿಂದ ನೃತ್ಯ ವೈಭವ, ಸೆ.8ರಂದು ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದಿಂದ ನರ ಶಾರ್ದೂಲ, ಸೆ.9ರಂದು ಉಡುಪಿ ಜಾನಪದ ವೈಭವ ಕಲಾಮಯಂ ಅವರಿಂದ ಜಾನಪದ, ಸಂಗೀತ ನೃತ್ಯ, ವಾದ್ಯ ಪರಿಕರಗಳೊಂದಿಗೆ ಕಾರ್ಯಕ್ರಮ, ಸೆ.10ರಂದು ‘ತುಳಸಿ ಜಲಂಧರ’ ಯಕ್ಷಗಾನ ಬಯಲಾಟವಿದೆ. ಸೆ.11ರಂದು ಬೆಳಗ್ಗೆ 10ಕ್ಕೆ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಸಾಯಂಕಾಲ 6ಕ್ಕೆ ವಿಸರ್ಜನಾ ಪೂಜೆ ನಡೆಯಲಿದೆ. ಬಳಿಕ ರಾತ್ರಿ 8ಕ್ಕೆ ನಿಶ್ಮಿತಾ ಸರ್ಕಲ್ ಬಳಿಯಿಂದ ವೈಭವದ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಈ ಬಾರಿಯ ಗಣೇಶೋತ್ಸವದ ಶೋಭಾಯಾತ್ರೆಯಲ್ಲಿ ಗಣೇಶ ಪ್ರತಿಮೆಯನ್ನು ಕುಳ್ಳಿರಿಸಿದ ಅಲಂಕೃತ ವಾಹನವು ಮೊದಲು ಸಾಗಲಿದ್ದು, ಬಳಿಕ ಇನ್ನುಳಿದ ಸ್ಥಬ್ಧಚಿತ್ರಗಳು ಸಾಗಲಿವೆ ಎಂದು ಅವರು ಹೇಳಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಪಿ.ಎಂ., ಉಪಾಧ್ಯಕ್ಷ ಕೃ?್ಣರಾಜ ಹೆಗ್ಡೆ, ಹಾಗೂ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿದ್ದರು.

ಆ.18ರಂದು ವಿವಿಧ ಸ್ಪರ್ಧೆ

ಗಣೇಶೋತ್ಸವದ ಅಂಗವಾಗಿ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ವಿಭಾಗಗಳಲ್ಲಿ ಆ.18ರಂದು ವಾಲಿಬಾಲ್ ಪಂದ್ಯ, ಆ.25ರಂದು ಕಬಡ್ಡಿ ಪಂದ್ಯಾಟ ನಡೆಯಲಿದೆ. ಸೆ.1ರಂದು ಪ್ರಾಥಮಿಕ, ಪ್ರೌಢ, ಕಾಲೇಜು ಮತ್ತು ಸಾರ್ವಜನಿಕ ವಿಭಾಗದಲ್ಲಿ ಚಿತ್ರಕಲೆ ಮತ್ತು ಗಾಯನ ಸ್ಪರ್ಧೆ, ಸೆ.4ರಂದು ಏಕವ್ಯಕ್ತಿ ಭರತನಾಟ್ಯ, ಸೆ.5ರಂದು ರಸಪ್ರಶ್ನೆ, ಸೆ.7ರಂದು ಸಮೂಹ ಭರತನಾಟ್ಯ ಮತ್ತು ಹೂ ಕಟ್ಟುವ ಸ್ಪರ್ಧೆ, ರಂಗೋಲಿ, ಸೆ.10ರಂದು ರಾಷ್ಟ್ರೀಯ ಸಮಗ್ರ ನೃತ್ಯ ಸ್ಪರ್ಧೆ ನಡೆಯಲಿದೆ.

ಸಾಮಾಜಿಕ ಜಾಗೃತಿಗಾಗಿ ರೀಲ್ಸ್-ಪೋಸ್ಟರ್‌ಗಳು


ಸಾಮಾಜಿಕ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮತ್ತು ಪೋಸ್ಟರ್ ಸ್ಪರ್ಧೆ. ಕಾಲೇಜು ವಿದ್ಯಾರ್ಥಿಗಳು, ಕುಟುಂಬ ಮತ್ತು ಸಾರ್ವಜನಿಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಆಸಕ್ತರು ರೀಲ್ಸ್ ಮತ್ತು ಪೋಸ್ಟರ್ ರಚಿಸಿ ಸೆ.5ರೊಳಗೆ 94486 25888, 63662 99969 ಫೋನ್ ನಂಬರ್‌ಗಳಿಗೆ ರವಾನಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net