60 ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ

03pnd1
Published on

ಪಾಂಡವಪುರ: ತಾಲೂಕಿನ ನರಹಳ್ಳಿ ಗ್ರಾಮದ ಶ್ರೀ ಚನ್ನಬೀರೇಶ್ವರ ಸ್ವಾಮಿ ದೇವಸ್ಥಾನದ ಹಬ್ಬದಂದು ನಡೆದ ಅನ್ನಸಂತರ್ಪಣೆ(ಪರ)ದಲ್ಲಿ ಊಟ ಮಾಡಿದ ಸುಮಾರು 60 ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದ್ದು, ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನರಹಳ್ಳಿ ಗ್ರಾಮದ ಶ್ರೀ ಚನ್ನಬೀರೇಶ್ವರಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಮತ್ತು ಶುಕ್ರವಾರ ಹಬ್ಬದ ಅಂಗವಾಗಿ ಎರಡು ದಿನ ಅನ್ನಸಂತರ್ಪಣೆ(ಪರ) ಏರ್ಪಡಿಸಲಾಗಿತ್ತು. ನೂರಾರು ಜನರು ಅವರೆಕಾಳು ಸಾರು, ರಾಗಿಮುದ್ದೆ ಊಟ ಮಾಡಿದ್ದರು. ಶನಿವಾರ ಗ್ರಾಮದ ಮೂರ‌್ನಾಲ್ಕು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿತ್ತು. ಭಾನುವಾರ ಸಂಜೆ ವೇಳೆಗೆ ಅದೇ ಗ್ರಾಮದ ಸುಮಾರು 60ಕ್ಕೂ ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡ 24 ಜನರನ್ನು ಚಿಕಿತ್ಸೆಗಾಗಿ ಪಾಂಡವಪುರ ಆಸ್ಪತ್ರೆಗೆ ದಾಖಲಿಸಲಾಯಿತು.

ವಿಷಯ ತಿಳಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ತಹಸೀಲ್ದಾರ್ ಸಂತೋಷ್‌ಕುಮಾರ್, ಇಒ ಲೋಕೇಶ್‌ಮೂರ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಸೇರಿದಂತೆ ಅಧಿಕಾರಿಗಳ ತಂಡ ನರಹಳ್ಳಿ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲೂ ಹಲವರಿಗೆ ತೀವ್ರ ವಾಂತಿ, ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮದ ಅಂಬೇಡ್ಕರ್ ಭವನದಲ್ಲಿಯೇ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದು ಅಸ್ವಸ್ಥಗೊಂಡಿದ್ದ 30ಕ್ಕೂ ಅಧಿಕ ಜನರಿಗೆ ಚಿಕಿತ್ಸೆ ನೀಡಲಾಗಿದೆ.

ದೇವಸ್ಥಾನದ ಬಳಿ ನಡೆದ ಅನ್ನಸಂತರ್ಪಣೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಪರ ನಡೆದು ಎರಡು ಕಳೆದಿರುವ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ಆಹಾರ ಮಾದರಿ ದೊರೆತಿಲ್ಲ. ಆದ್ದರಿಂದ ಗ್ರಾಮದಲ್ಲಿ ನೀರಿನ ಮಾದರಿ ಪರೀಕ್ಷೆ ನಡೆಸಲಾಗಿದೆ. ಸ್ಥಳೀಯರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ತಾಲೂಕಿನಲ್ಲಿ ಎಲ್ಲೆಲ್ಲಿ ಪರ ನಡೆಸಲಾಗುತ್ತಿದೆಯೋ ಎಲ್ಲ ಕಡೆ ತೆರಳಿ ಅರಿವು ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ತಿಳಿಸಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಭೇಟಿ: ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ತಿಳಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಪಾಂಡವಪುರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದರು. ಬಳಿಕ ವೈದ್ಯರ ಬಳಿ ಮಾಹಿತಿ ಪಡೆದರು. ಸರಿಯಾದ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಅಗತ್ಯವಿದ್ದರೆ ಮಂಡ್ಯ, ಮೈಸೂರಿಗೆ ರವಾನಿಸುವಂತೆ ವೈದ್ಯರಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net