

ವಿಜಯವಾಣಿ ಸುದ್ದಿಜಾಲ ಕಾರವಾರ
ಸುಮಾರು 6 ವರ್ಷಗಳ ಹಿಂದೆ ಕೊಲೆಯಾಗಿದ್ದ ವ್ಯಕ್ತಿಯನ್ನು ದಫನ್ ಮಾಡಲಾಗಿದ್ದ ಜಾಗವನ್ನು ನ್ಯಾಯಾಲಯದ ಆದೇಶದಂತೆ ಅಗೆದು ತೆಗೆದು ಎಲುಬುಗಳ ಮಾದರಿಯನ್ನು ಸಂಗ್ರಹಿಸಿದ ಘಟನೆ ಮಂಗಳವಾರ ನಗರದಲ್ಲಿ ನಡೆಯಿತು.
ನ್ಯಾಯಾಲಯದ ಸೂಚನೆಯ ಮೇರೆಗೆ ಶಿರಸಿ ಎಸಿ ದೇವರಾಜ್ ಎಲ್. ಹಾಗೂ ಕ್ರಿಮ್ಸ್ ವೈದ್ಯರ ಸಮ್ಮುಖದಲ್ಲಿ ಯಲ್ಲಾಪುರ ಪೊಲೀಸರು ಕಾರವಾರದ ಕೋಡಿಬಾಗದಲ್ಲಿರುವ ಮುಸ್ಲಿಂ ಖಬರಸ್ಥಾನಕ್ಕೆ ತೆರಳಿ ಅಲ್ಲಿ ಹೂಳಲಾಗಿದ್ದ ಜಾಗವನ್ನು ಗುರುತಿಸಿ, ಅದನ್ನು ಅಗೆದು ತೆಗೆದರು. ಎಲುಬುಗಳನ್ನು ಸಂಗ್ರಹಿಸಿ ಡಿಎನ್‌ಎ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಿದರು.
ಹಿನ್ನೆಲೆ:
2017 ರ ಏಪ್ರೀಲ್‌ನಲ್ಲಿ ಕಾರವಾರದ ಅಯಾಜ್ ಅಬ್ದುಲ್ ಶೇಖ್ ಎಂಬುವವರ ಶವ ಯಲ್ಲಾಪುರದಲ್ಲಿ ಪತ್ತೆಯಾಗಿತ್ತು. ಯಲ್ಲಾಪುರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ಕೈಗೊಂಡಾಗ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಅವರ ಕೊಲೆ ನಡೆದಿರುವುದು ಪತ್ತೆಯಾಗಿತ್ತು. ಈ ಸಂಬಂಧ ಯಲ್ಲಾಪುರ ಪೊಲೀಸರು ಮಹಾರಾಷ್ಟç ಮೂಲದ ನಾಲ್ವರನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈಗ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ವ್ಯಕ್ತಿಯ ಗುರುತು ಖಚಿತಪಡಿಸಿಕೊಳ್ಳುವ ಸಲುವಾಗಿ ಕೊಲೆಯಾದ ವ್ಯಕ್ತಿಯ ಡಿಎನ್‌ಎ ಪರೀಕ್ಷೆ ಮಾಡಬೇಕಾಗಿರುವುದರಿಂದ ಈಗ ಎಲುಬುಗಳನ್ನು ಸಂಗ್ರಹಿಸುವಂತೆ ನ್ಯಾಯಾಲಯದ ಸೂಚನೆ ನೀಡಿತ್ತು. ಇದರಿಂದ ಯಲ್ಲಾಪುರ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.