ಆದಿವಾಸಿಗಳ 6 ಟೆಂಟ್ ತೆರವು

ಆದಿವಾಸಿಗಳ 6 ಟೆಂಟ್ ತೆರವು
Published on

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪೊನ್ನಂಪೇಟೆ ತಾಲೂಕು ಕುಟ್ಟ ಗ್ರಾಮ ವ್ಯಾಪ್ತಿಯ ಅತ್ತೂರುಕೊಲ್ಲಿ ಪ್ರದೇಶದಲ್ಲಿ ಎರಡು ದಿನಗಳ ಹಿಂದೆ ಆದಿವಾಸಿಗಳು ಮತ್ತೆ ಹೊಸದಾಗಿ ಹಾಕಿದ್ದ 6 ಟೆಂಟ್‌ಗಳನ್ನು ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ಅರಣ್ಯ ಇಲಾಖೆ ತೆರವುಗೊಳಿಸಿದೆ.

ಈ ವೇಳೆ ಆದಿವಾಸಿಗಳು ಮತ್ತು ಇಲಾಖೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮಾತನಾಡಿದ ನಾಗರಹೊಳೆ ಎಸಿಎಫ್ ಅನನ್ಯಕುಮಾರ್ ಮೇ 5ರಂದು ಈ ಪ್ರದೇಶದಲ್ಲಿ ಅಕ್ರಮವಾಗಿ ಕಾಡನ್ನು ಪ್ರವೇಶಿಸಿ 6 ಟೆಂಟ್‌ಗಳನ್ನು ಹಾಕಿಕೊಂಡು 200ಕ್ಕೂ ಹೆಚ್ಚು ಜನರು ನೆಲೆಸಿದ್ದರು. ಇವರಿಗೆ ತೆರವುಗೊಳಿಸಲು ನೋಟಿಸ್ ನೀಡಲಾಗಿತ್ತು. ಆದರೆ, ಮಾನವೀಯ ದೃಷ್ಟಿಯಿಂದ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಂಡಿರಲಿಲ್ಲ. ಆದರೆ ಜೂ.17ರಂದು ಮತ್ತೆ 6 ಟೆಂಟ್‌ಗಳನ್ನು ಹಾಕಲಾಗಿದೆ. ಅರಣ್ಯದ 40ಕ್ಕೂ ಹೆಚ್ಚು ಸಣ್ಣ, ಮಧ್ಯಮಗಾತ್ರದ ಮರಗಳನ್ನು ಕಡಿದು ಟೆಂಟ್ ನಿರ್ಮಿಸಿ ಟಾರ್ಪಾಲ್ ಹೊದಿಸಿಕೊಂಡಿದ್ದಾರೆ. ಈ ಟೆಂಟ್‌ಗಳನ್ನು ತೆರವುಗೊಳಿಸಲಾಗಿದೆ. ಪೊಲೀಸರು ಅರಣ್ಯದೊಳಗೆ ಪ್ರವೇಶಿಸುವುದಕ್ಕೆ ಅಡ್ಡಿಪಡಿಸಿದ್ದರು. ಆದರೆ, ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ಇನ್ನೊಂದು ಮಾರ್ಗದಿಂದ ಒಳಬಂದು ಟೆಂಟ್‌ಗಳನ್ನು ತೆರವುಗೊಳಿದ್ದಾರೆಂದು ತಿಳಿಸಿದರು.

ಅರ್ಜಿ ತಿರಸ್ಕೃತಗೊಂಡಿವೆ: ಹುಣಸೂರು ವಲಯ ಎಸಿಎಫ್ ಎನ್.ಲಕ್ಷ್ಮೀಕಾಂತ್ ಮಾತನಾಡಿ, ಅತ್ತೂರುಕೊಲ್ಲಿ ಪ್ರದೇಶದಲ್ಲಿ ಮೊಕ್ಕಾಂ ಹೂಡಿರುವ ಆದಿವಾಸಿಗಳ ಅರಣ್ಯಹಕ್ಕಿಗಾಗಿ ಅರ್ಜಿಗಳು ಮೇ 22ರಂದು ಕೊಡಗು ಉಪವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿಯಲ್ಲಿ ತಿರಸ್ಕೃತಗೊಂಡಿದ್ದು, ಅರ್ಜಿದಾರರಿಗೆ ಮೇಲ್ಮನವಿ ಸಲ್ಲಿಸಲು 60 ದಿನಗಳ ಕಾಲಾವಕಾಶವಿದೆ. ಕಾರ್ಯಾಚರಣೆ ವೇಳೆ ಈ ಹಿಂದೆ ಮೇ 5ರಂದು ಕಟ್ಟಿಕೊಂಡಿದ್ದ 6 ಟೆಂಟ್‌ಗಳನ್ನು ಹಾಗೆಯೇ ಬಿಡಲಾಗಿದೆ. ಆದಿವಾಸಿಗಳ ವಿರುದ್ಧ ಅಕ್ರಮ ಅರಣ್ಯ ಪ್ರವೇಶ, ಒತ್ತುವರಿ ಮತ್ತು ಆವಾಸಸ್ಥಾನಗಳ ನಾಶ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.

ಕಾರ್ಯಾಚರಣೆಯಲ್ಲಿ ಮಡಿಕೇರಿ ಡಿವೈಎಸ್‌ಪಿ ಸೂರಜ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಶಿವರುದ್ರಪ್ಪ, ಪಿಎಸ್‌ಐ ಮಹದೇವಪ್ಪ, ವಲಯ ಅರಣ್ಯಾಧಿಕಾರಿ ಎಚ್.ಎಂ.ಮಂಜುನಾಥ್, ಎಂ.ಆರ್.ರಶ್ಮಿ, ಉಪವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ನಿಮಗೆ ಒಳ್ಳೆಯದಾಗೋದಿಲ್ಲ ಸಾರ್: ಆದಿವಾಸಿಗಳ ಟೆಂಟ್‌ಗಳನ್ನು ತೆರವುಗೊಳಿಸುವ ವೇಳೆ ಆದಿವಾಸಿ ಮಹಿಳೆಯರು ಮತ್ತು ಹಿರಿಯರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು. ಈ ಮಳೆಯಲ್ಲಿ ನಾವು ಎಲ್ಲಿ ಇರೋಣ? ಕಟ್ಟಿದ ಟೆಂಟ್ ತೆಗೀತೀದ್ದೀರಲ್ಲ, ನಿಮಗೆ ದೇವರು ಒಳ್ಳೇದ್ ಮಾಡೋದಿಲ್ಲ. ನಮ್ಮ ನೋವು ನಿಮಗೆ ತಟ್ಟುತ್ತೆ ಎಂದು ಶಾಪ ಹಾಕುತ್ತಿದ್ದದ್ದು ಕಂಡುಬಂತು.

ಅರಣ್ಯ ಹಕ್ಕು ಕಾಯ್ದೆ ಕಾಣಿಸುತ್ತಿಲ್ಲವೇ?: ಅತ್ತೂರುಕೊಲ್ಲಿ ಹಾಡಿ ಎನ್ನುವುದೇ ಇಲ್ಲ ಎನ್ನುವ ಅಧಿಕಾರಿಗಳ ಮಾತು ಸತ್ಯಕ್ಕೆ ದೂರವಾಗಿದೆ. ನಮ್ಮ ಹಿರಿಯರು ಇಲ್ಲಿ ವಾಸಿಸುತ್ತಿದ್ದರು ಎಂದು ತಿಳಿಸಿದರೂ ಇಲಾಖೆ ನಂಬುತ್ತಿಲ್ಲ. ಸರ್ಕಾರ ಮತ್ತು ಶಾಸಕರು ನಮ್ಮ ಪರವಾಗಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮ ವಿರುದ್ಧ ಇದ್ದಾರೆ. ಬರೀ ವನ್ಯಜೀವಿ ಕಾಯ್ದೆ ಕುರಿತೇ ಮಾತನಾಡುವ ಇವರಿಗೆ ಅರಣ್ಯ ಹಕ್ಕು ಕಾಯ್ದೆ ಕೂಡ ಇದೆ ಎನ್ನುವುದು ತಿಳಿದಿಲ್ಲವೇ? ಅರಣ್ಯ ಇಲಾಖೆಯ ಈ ನಡೆ ಖಂಡನೀಯ. ನಮ್ಮ ಹೋರಾಟ ಮುಂದುವರಿಯಲಿದೆ. ಜೆ.ಕೆ.ಶಿವು ಅತ್ತೂರುಕೊಲ್ಲಿ ಹಾಡಿ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net