ದರೋಡೆಗೆ ಹೊಂಚು ಹಾಕುತ್ತಿದ್ದ 6 ಮಂದಿ ಸೆರೆ

roberry
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ದರೋಡೆಗೆ ಹೊಂಚು ಹಾಕಿ ಕಾರಿನಲ್ಲಿ ಸಂಚರಿಸುತ್ತಿದ್ದ 6 ಮಂದಿಯನ್ನು ಕಾಪು ಠಾಣೆ ಪೊಲೀಸರು ರಾಷ್ಟ್ರೀಯ ಹೆದ್ದಾರಿಯ ಕೋತಲಕಟ್ಟೆಯಲ್ಲಿ ಶನಿವಾರ ರಾತ್ರಿ ಬಂಧಿಸಿದ್ದಾರೆ.

ದ.ಕ. ಜಿಲ್ಲೆ ತಾಳಿಪಾಡಿಯ ಅಮಿತ್‌ರಾಜ್(38), ಪ್ರಕಾಶ್ ಕಾಟಿಪಳ್ಳ(23), ವರುಣ್ ಕುಮಾರ್ ನೀರುಮಾರ್ಗ(30), ಕಾರ್ತಿಕ್ ಶೆಟ್ಟಿ ಇಡ್ಯಾ(28), ಅಭಿಷೇಕ್ ಕಾಟಿಪಳ್ಳ ಕೈಕಂಬ(22), ಶ್ರೀಕಾಂತ್ ಶ್ರೀಪತಿ ಫರಂಗಿಪೇಟೆ(32) ಬಂಧಿತರು.

ಉಡುಪಿಯಿಂದ ಕಾಪು ಕಡೆಗೆ ಬರುತ್ತಿದ್ದ ಕಾಪು ವೃತ್ತನಿರೀಕ್ಷಕಿ ಜಯಶ್ರೀ ಮಾನೆ ಅವರು ಉದ್ಯಾವರ ಸೇತುವೆ ಬಳಿ ಅನುಮಾನಾಸ್ಪದವಾಗಿ ಕಾರೊಂದು ಸಂಚರಿಸುತ್ತಿರುವುದನ್ನು ಗಮನಿಸಿದ್ದರು. ಕಾರನ್ನು ನಿಲ್ಲಿಸಲು ಯತ್ನಿಸಿದಾಗ ಆರೋಪಿಗಳು ಕಾರನ್ನು ಅತಿ ವೇಗವಾಗಿ ಚಲಾಯಿಸಿಕೊಂಡು ಕಾಪು ಕಡೆಗೆ ತೆರಳಿದ್ದರು. ತಕ್ಷಣ ಕಾಪು ಮತ್ತು ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಿದ ನೀಡಿ ಕಾಪು ಎಸ್‌ಐ ಅಬ್ದುಲ್ ಖಾದರ್ ನೇತೃತ್ವದ ತಂಡದ ಸಹಕಾರದೊಂದಿಗೆ ಕೋತಲಕಟ್ಟೆ ಬಳಿ ಕಾರನ್ನು ತಡೆದಿದ್ದಾರೆ.

ಕಾರಿನಲ್ಲಿದ್ದವರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ದರೋಡೆಗೆ ಹೊಂಚು ಹಾಕುತ್ತಿರುವ ವಿಚಾರ ಬೆಳಕಿಗೆ ಬಂದಿತ್ತು. ಕಾರ್‌ನಲ್ಲಿ ಡ್ಯಾಗರ್, ಚೂರಿ, ಕಬ್ಬಿಣದ ಪೈಪ್ ಮತ್ತು ಮರಳು ಮಿಶ್ರಿತ ಮೆಣಸಿನ ಪುಡಿ ಪತ್ತೆಯಾಗಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಮತ್ತಷ್ಟು ವಿಚಾರಣೆಗೊಳಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net