

ಬೆಳಗಾವಿ: ಶಾಹುನಗರದ ಮನೆಯೊಂದರಲ್ಲಿ ಶನಿವಾರ ಬೆಳಗ್ಗೆ ವಿದ್ಯುತ್ ತಗುಲಿ ಮೂವರು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಥಳಕ್ಕೆ ಧಾವಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಸರ್ಕಾರದಿಂದ ತಲಾ 2 ಲಕ್ಷ ರೂ. ಪರಿಹಾರ ಮಂಜೂರು ಮಾಡಿಸಿದರು. ಜತೆಗೆ ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದಲೂ ಆರ್ಥಿಕ ಸಹಾಯ ಮಾಡಿದರು.
ವಾಚಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಈರಪ್ಪ ಲಮಾಣಿ (50), ಶಾಂತವ್ವ ಲಮಾಣಿ (45), ಅವರ ಮೊಮ್ಮಗಳು ಅನ್ನಪೂರ್ಣಾ ಲಮಾಣಿ (8) ಮೃತಪಟ್ಟಿದ್ದರು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸಚಿವೆ ಹೆಬ್ಬಾಳ್ಕರ್ ಕುಟುಂಬದವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ಸ್ಥಳದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಈ ಘಟನೆ ಬಗ್ಗೆ ವಿವರಿಸಿ, ಪರಿಹಾರ ಮಂಜೂರು ಮಾಡುವಂತೆ ಕೋರಿದರು. ಅದಕ್ಕೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ ಹಣ ಬಿಡುಗಡೆಗೊಳಿಸಲು ಆದೇಶ ಹೊರಡಿಸಿದ್ದಾರೆ.