ಕಾಲುವೆಗಳ ಸಿಲ್ಟ್ ತೆಗೆಯಲು 58 ಲಕ್ಷ ರೂ.ಅನುದಾನ

IMG_20240728_144756
Published on

ಬಾಗೂರು: ಹೋಬಳಿಯ 19 ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸುವ ಕಲ್ಲೆ ಸೋಮನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಪ್ರಾಯೋಗಿಕವಾಗಿ ಈ ಹಂಗಾಮಿನಲ್ಲಿ ನೀರು ಹರಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.


ಬಾಗೂರು ಕೆರೆ ಕೋಡಿ ದ್ಯಾವೇನಹಳ್ಳಿ ಪಂಪ್‌ಹೌಸ್ ಹತ್ತಿರ ಬಾಗೂರು ಹಾಗೂ ನುಗ್ಗೇಹಳ್ಳಿ ಏತ ನೀರಾವರಿ ಯೋಜನೆಗಳಿಗೆ 91 ಕ್ಯೂಸೆಕ್ ನೀರು ಹರಿಸುವ ಪಂಪ್‌ಸೆಟ್‌ಗೆ ಚಾಲನೆ ನೀಡಿ ಮಾತನಾಡಿದರು. ಏತ ನೀರಾವರಿಗಳ ಕಾಲುವೆ ಸಿಲ್ಟ್ ತೆಗೆಯಲು 58 ಲಕ್ಷ ರೂ. ಅನುದಾನ ಚನ್ನರಾಯಪಟ್ಟಣ ವಿಭಾಗಕ್ಕೆ ಬಿಡುಗಡೆಯಾಗಿದೆ. ತೋಟಿ ಏತ ನೀರಾವರಿ ಯೋಜನೆಯ 900 ಮೀಟರ್ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರ ಕಾಮಗಾರಿ ಪ್ರಾರಂಭಿಸಿದ್ದಾರೆ. ಹಿರೀಸಾವೆ ಏತ ನೀರಾವರಿ ಯೋಜನೆಯ ಮೋಟರ್ ಪಂಪ್‌ಗೆ ಶೀಘ್ರ ಚಾಲನೆ ನೀಡಲಾಗುವುದು. ನುಗ್ಗೇಹಳ್ಳಿ ಕೆರೆಗೆ 35 ದಿನ ನೀರು ಹರಿಸಲು ಇಂಜಿನಿಯರ್‌ಗೆ ಸೂಚನೆ ನೀಡಲಾಗಿದೆ. ಚೌಡೇನಹಳ್ಳಿ, ದೇವಿಗೆರೆ, ಕಲ್ಕೆರೆ, ದಾಸಪುರ, ಕೆರೆಗಳಿಗೂ ಹಂತ ಹಂತವಾಗಿ ನೀರು ಹರಿಸಲಾಗುತ್ತದೆ. ಈ ಗ್ರಾಮಗಳ ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.


ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್.ಶಿವಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ರಾಮಚಂದ್ರ, ಶಿವಶಂಕರ್ ಕುಂಟೆ, ಮುಖಂಡರಾದ ವಳಗೇರಳ್ಳಿ ಮಂಜುನಾಥ್, ತೊಟಿ ನಾಗರಾಜ್, ಎನ್.ಬಸವರಾಜ್, ಎನ್.ಎಸ್. ಲಕ್ಷ್ಮಣ್, ಎಚ್.ಪಿ.ಸಂಪತ್ ಕುಮಾರ್, ದಸರಿಘಟ್ಟ ಕಿರಣ್, ಬಾಗೂರು ಕಾಂತರಾಜ್, ಹರೀಶ್, ರಘು, ಮಾವಿನಹಳ್ಳಿ ಸುರೇಶ್, ಹೂವಿನಳ್ಳಿ ಬಾಬು, ಹೊನ್ನೇನಹಳ್ಳಿ ಸ್ವಾಮಿ, ದಾಸಪುರ ಧರಣಿ, ಕೊಪ್ಪಲು ಮಂಜುನಾಥ್, ಹೊನ್ನೇಗೌಡ, ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net