

ಕನಕಪುರ : ರೈತರ ಮಕ್ಕಳಿಗೆ ಕೃಷಿ ಅಧ್ಯಯನ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ರೂರಲ್ ಕಾಲೇಜಿನಿಂದ ಎಸ್.ಕರಿಯಪ್ಪ ಕೃಷಿ ಪದವಿ ಕಾಲೇಜು ಸ್ಥಾಪನೆಯಾಗಿದ್ದು, ಡಿ.7ರಂದು ಉದ್ಘಾಟನೆಗೊಳ್ಳಲಿದೆ ಎಂದು ಆರ್.ಇ.ಎಸ್ ಸಂಸ್ಥೆಯ ಅಧ್ಯಕ್ಷ ಎಚ್.ಕೆ.ಶ್ರೀಕಂಠ ತಿಳಿಸಿದರು.
ಸಂಸ್ಥೆಯ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 2ನೇ ಕೃಷಿ ಕಾಲೇಜು ಕನಕಪುರಕ್ಕೆ ಮಂಜೂರಾಗಿದೆ. ಸ್ವತಂತ್ರ ಪೂರ್ವದಲ್ಲಿಯೇ ಬೆಂಗಳೂರು ಗ್ರಾಮಾಂತರ ಜಿಲ್ಲ್ಲೆ ಶಿಕ್ಷಣಕ್ಕೆ ಒತ್ತು ನೀಡಿದೆ. ಜತೆಗೆ ಕೃಷಿ ಕ್ಷೇತ್ರವನ್ನು ಬಲಪಡಿಸಬೇಕು ಹಾಗೂ ಗ್ರಾಮೀಣ ಮಕ್ಕಳ ಅಭಿವೃದ್ಧಿಯ ಪ್ರಗತಿಯ ಬಗ್ಗೆ ಕನಸು ಕಂಡಿದ್ದ ಕರಿಯಪ್ಪ ಅವರಿಗೆ ಸರ್ಕಾರ ತೋರಿದ ಗೌರವ ಇದಾಗಿದೆ. ಗ್ರಾಮೀಣ ಮಕ್ಕಳ ಕೃಷಿ ಚಟುವಟಿಕೆಗೆ ಬೆಂಬಲ ನೀಡುವ ಅವರ ಕನಸು ನನಸಾಗುವಂತೆ ಕೃಷಿ ವಿಜ್ಞಾನ ಕಾಲೇಜು ಆರಂಭವಾಗುತ್ತಿದೆ ಎಂದರು.
ನೂತನ ಕೃಷಿ ಕಾಲೇಜಿನಲ್ಲಿ 60 ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅವಕಾಶವಿದೆ. ಸಿಇಟಿ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳಿಂದ ನಲವತ್ತು ವಿದ್ಯಾರ್ಥಿಗಳು ದಾಖಲಾಗಲಿದ್ದು, ಉಳಿದ ಸೀಟುಗಳಿಗೆ ಹೆಚ್ಚಿನದಾಗಿ ತಾಲೂಕಿನ ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಕಾಲೇಜಿಗೆ ನುರಿತ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ, ಗುಣಮಟ್ಟದ ವಿದ್ಯಾಭ್ಯಾಸ ನೀಡುವುದೇ ಸಂಸ್ಥೆಯ ಉದ್ದೇಶವಾಗಿದ್ದು, ದಾಖಲಾಗಿರುವ ಹೊಸ ಜಿಲ್ಲೆಗಳ ವಿದ್ಯಾರ್ಥಿಗಳು ತಂಗಲು ವಸತಿ ಗೃಹಗಳ ವ್ಯವಸ್ಥೆಗಳನ್ನು ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.
ಸಂಸ್ಥೆಯ ಖಜಾಂಚಿ ಮಂಜುನಾಥ್, ನಿರ್ದೇಶಕರಾದ ಕೆ.ಬಿ.ನಾಗರಾಜು, ಎಂ.ಎಲ್.ಶಿವಕುಮಾರ್, ಕೃಷಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ.ಸಿದ್ದರಾಮೇಗೌಡ, ಆಡಳಿತ ಅಧಿಕಾರಿ ಪ್ರೊ. ಟಿ.ಬಿ.ಪುಟ್ಟರಾಜು, ಉಪಪ್ರಾಂಶುಪಾಲ ದೇವರಾಜು ಇತರರು ಇದ್ದರು.ಮಾರ್ ಇದ್ದರು.