

ಬೆಂಗಳೂರು: ಟ್ರಿನಿಟಿ ವೃತ್ತದ ಬಳಿಯಿರುವ ಭಾರತೀಯ ಸೇನೆಯ '515 ಆರ್ಮಿ ಬೇಸ್ ವರ್ಕ್ಶಾಪ್'ನಲ್ಲಿ ಅನೇಕ ವರ್ಷಗಳಿಂದ ಪಾಳು ಬಿದ್ದಿದ್ದ 'ಈಗಲ್ ನೆಸ್ಟ್' ಕೆರೆಯನ್ನು ಭಾರತೀಯ ಸೇನೆ, 3ಒನ್4 ಕ್ಯಾಪಿಟಲ್, ದ್ಯಾಟ್ಸ್ ಇಕೊ ಫೌಂಡೇಷನ್ ಹಾಗೂ ಹ್ಯಾಂಡ್ಸ್ ಆನ್ ಸಿಎಸ್ಆರ್ ಜಂಟಿಯಾಗಿ ಪುನಶ್ಚೇತನಗೊಳಿಸಿವೆ.
ಪುನಶ್ಚೇತನಗೊಂಡ ಸರೋವರವನ್ನು ಲೆಫ್ಟಿನೆಂಟ್ ಜನರಲ್ ಕರಣ್ಬೀರ್ ಸಿಂಗ್ ಬ್ರಾರ್, 3ಒನ್4 ಕ್ಯಾಪಿಟಲ್ ಚೇರ್ಮನ್ ಟಿ.ವಿ. ಮೋಹನದಾಸ್ ಪೈ, ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಈಚೆಗೆ ಉದ್ಘಾಟಿಸಿದರು.
ಈ ಕುರಿತು ಲೆಫ್ಟಿನೆಂಟ್ ಜನರಲ್ ಕರಣ್ಬೀರ್ ಸಿಂಗ್ ಬ್ರಾರ್ ಮಾತನಾಡಿ, ಸಣ್ಣ ಕಾಲುವೆಯಂತಿದ್ದ ಪ್ರದೇಶ, ಪುನಶ್ಚೇತನಗೊಂಡು ದೊಡ್ಡ ಕೆರೆಯಾಗಿದೆ. ನೀರಿನ ಸಂಗ್ರಹ ಮಟ್ಟ ಹೆಚ್ಚಾಗಿದ್ದು, ಸುತ್ತಲ ಪರಿಸರದಲ್ಲಿ ಅಂತರ್ಜಲ ಹೆಚ್ಚಲಿದೆ. ಹಲವು ಸಂಸ್ಥೆಗಳ ಒಟ್ಟುಗೂಡುವಿಕೆಯಿಂದ ಇಂತಹ ಸಮಾಜಮುಖಿ ಕಾರ್ಯ ಸಾಧ್ಯವಾಗಿದೆ ಎಂದರು.
3ಒನ್4 ಕ್ಯಾಪಿಟಲ್ನ ಸಂಸ್ಥಾಪಕ ಪಾಲುದಾರ ಸಿದ್ಧಾರ್ಥ್ ಪೈ ಮಾತನಾಡಿ, ಕೆರೆಯ ಪುನಶ್ಚೇತನ ಕಾರ್ಯಕ್ಕೆ ಕಳೆದ ಮಾರ್ಚ್ನಲ್ಲಿ ಭೂಮಿಪೂಜೆ ನೆರವೇರಿಸಲಾಗಿತ್ತು. ಬಳಿಕ ಹೂಳು ತೆಗೆದು, ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲಾಗಿದೆ. ಇದೀಗ ಕಲುಷಿತಗೊಂಡಿದ್ದ ಕೆರೆ, ಸಿಹಿನೀರಿನ ಸರೋವರವಾಗಿ ಬದಲಾಗಿದೆ. ಒಟ್ಟಾರೆ ಪರಿಸರ ಸವಾಲುಗಳನ್ನು ಎದುರಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.
ಮೇಜರ್ ಜನರಲ್ ವಿಟಿ ಮ್ಯಾಥ್ಯೂಸ್ ಮಾತನಾಡಿ, ಸೇನಾ ಕಂಟೋನ್ಮೆಂಟ್ಗಳಲ್ಲಿ ಉದ್ಯಾನಗಳನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತೀಯ ಸೇನೆ ಪರಿಸರ ಸಂರಣೆಗೆ ಕೊಡುಗೆ ನೀಡುತ್ತಿದೆ ಎಂದರು.
ದಟ್ಸ್ ಇಕೊ ಫೌಂಡೇಷನ್ನ ಹ್ಯಾಂಡ್ಸ್ಆನ್ಸಿಎಸ್ಆರ್ನ ಟ್ರಸ್ಟಿಗಳಾದ ಎಂ. ಗುರುನಂದನ್ ರಾವ್, ಹರ್ಷ ತೇಜ್ ಹಾಗೂ ಸೇನಾಧಿಕಾರಿಗಳಿದ್ದರು.
ಸೇನಾ ಪ್ರದೇಶದಲ್ಲಿ ಪುನಶ್ಚೇತನಗೊಳಿಸಿರುವ ಕೆರೆಯಿಂದ ಪರಿಸರಕ್ಕೆ ಉತ್ತಮ ಕೊಡುಗೆ ಕೊಟ್ಟಂತಾಗಿದೆ. ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಲಾಗಿದೆ. ಇದರ ಲವಾಗಿ ಸುಮಾರು 2 ಕಿಮೀ ವ್ಯಾಪ್ತಿಯೊಳಗೆ ಅಂತರ್ಜಲ ಮಟ್ಟ ಹೆಚ್ಚಲಿದೆ.
- ಟಿ.ವಿ. ಮೋಹನದಾಸ್ ಪೈ, 3ಒನ್4 ಕ್ಯಾಪಿಟಲ್ ಚೇರ್ಮನ್
ನೀರು ಅತ್ಯಮೂಲ್ಯ. ಹಿಂದೆ ಪ್ರತಿ ಊರಿನಲ್ಲೂ ಸಾಕಷ್ಟು ಕೆರೆಗಳಿದ್ದವು. ಆದರೆ ಅಭಿವೃದ್ಧಿಯಿಂದಾಗಿ ನಗರದಲ್ಲಿ ಜಲಮೂಲವಾಗಿದ್ದ ಕೆರೆಗಳು ವಿನಾಶ ಹೊಂದಿವೆ. ಕೆರೆಗಳು ಅಭಿವೃದ್ಧಿಗೊಂಡದಷ್ಟೂ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಜತೆಗೆ ಜಲಚರಗಳಿಗೂ ಆವಾಸ ಸ್ಥಾನ ಸಿಕ್ಕಂತಾಗುತ್ತದೆ. - ರಾಜ್ ಬಿ. ಶೆಟ್ಟಿ, ನಟ-ನಿದೇರ್ಶಕ
ಸಾವಿರಕ್ಕೂ ಅಧಿಕ ಕೆರೆಗಳಿದ್ದ ಬೆಂಗಳೂರಿನಲ್ಲಿ ಪ್ರಸ್ತುತ ಬೆರಳೆಣಿಕೆಯಷ್ಟು ಮಾತ್ರ ಉಳಿದಿವೆ. ನಗರೀಕರಣ ಮತ್ತು ಅಭಿವೃದ್ಧಿ ಚಟುವಟಿಕೆಗಳಿಂದಾಗಿ ರಾಜಧಾನಿಯ ಜಲಮೂಲಗಳಾಗಿದ್ದ ಸಾಕಷ್ಟು ಕೆರೆಗಳು ಅವನತಿಯಾಗಿವೆ. ಪರಿಣಾಮ ಅಂತರ್ಜಲ ಕುಸಿತವಾಗಿದ್ದು, ವರ್ಷದಿಂದ ವರ್ಷಕ್ಕೆ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. ರಾಜಧಾನಿಯ ಅಂತರ್ಜಲ ಮಟ್ಟ ಹೆಚ್ಚಿಸಲು ಮತ್ತು ನಗರದ ಜೀವ ವೈವಿಧ್ಯತೆಯನ್ನು ಉಳಿಸಿಕೊಳ್ಳಲು ಕೆರೆಗಳ ಹಾಗೂ ಪರಿಸರ ಸಂರಕ್ಷಣಾ ಪ್ರಯತ್ನಗಳಾಗಬೇಕಿವೆ. ಈ ನಿಟ್ಟಿನಲ್ಲಿ ಆರ್ಮಿ ಬೇಸ್ ಕ್ಯಾಂಪ್ನಲ್ಲಿದ್ದ ಕೆರೆಗೆ ಹೊಸ ರೂಪ ಕೊಡುವ ಮೂಲಕ, ನೀರು ಸಂಗ್ರಹಣಾ ಸಾಮರ್ಥ್ಯವನ್ನು ಶೇ.200 ಹೆಚ್ಚಿಸಲಾಗಿದೆ. ಈ ಪ್ರಯತ್ನದಿಂದ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಲಿದೆ. ಕೆರೆಯ ಉದ್ಘಾಟನೆ ಭಾಗವಾಗಿ ಸುತ್ತಲೂ ಗಿಡಗಳನ್ನು ನೆಡಲಾಗಿದ್ದು, ವಾತಾವರಣಕ್ಕೂ ಸಹಕಾರಿಯಾಗಲಿದೆ.