

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಇಲ್ಲಿನ ಸೇವಾ ಸಂಘದಿಂದ 50ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ನಡೆಯಲಿದ್ದು, ಅ.3ರಿಂದ 14ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ ನಡೆಯಲಿದೆ.
ಸುವರ್ಣ ಮಹೋತ್ಸವದ ಅಂಗವಾಗಿ ನಿರ್ಮಿಸಲಾದ ನೂತನ ಕಟ್ಟಡವನ್ನು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಶ್ರೀಗಳು ಅ.3ರಂದು ಉದ್ಘಾಟಿಸಲಿದ್ದು, ಮಾಜಿ ಸಚಿವ ಪ್ರಮೋದ ಮಧ್ವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ.ಅ. 4ರಿಂದ 7ರ ತನಕ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಹೊರೆಕಾಣಿಕೆ ಸಮರ್ಪಣೆ, ಮೆರವಣಿಗೆ ಹಾಗೂ ವಿವಿಧ ಸ್ಪಧೆಗಳು ನಡೆಯಲಿವೆ.
ಅ.9ರಂದು ಜಿ.ರಾಘವೇಂದ್ರ ನಾರಾಯಣ ಆಚಾರ್ಯ ನೇತೃತ್ವದಲ್ಲಿ ಶ್ರೀ ಶಾರದಾ ದೇವಿಯ ಪ್ರತಿಷ್ಠಾಪನೆ ನಡೆಯಲಿದ್ದು, ದೇವಿಗೆ ನೂತನ ಬೆಳ್ಳಿ ವೀಣೆ ಮತ್ತು ತ್ರಿಶೂಲ ಸಮರ್ಪಣೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ಕ್ಕೆ ಸ.ವಿ. ಪದವಿ ಪೂರ್ವ ಕಾಲೇಜು ವಠಾರದಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಗವಿಮಠದ ಶ್ರೀ ಗವಿ ಸಿದ್ಧೇಶ್ವರ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ಅರುಣ್ ಕುಮಾರ್ ಪುತ್ತಿಲ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಾಧಕರಿಗೆ ಗೌರವ ಸನ್ಮಾನ ನಡೆಯಲಿದೆ.
ಅ.10ರಂದು ಸಾರ್ವಜನಿಕ ಚಂಡಿಕಾಯಾಗ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4ಕ್ಕೆ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಬಿ.ವೈ.ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ವಿವಿಧ ಕಾರ್ಯಕ್ರಮ ನಡೆಯಲಿದೆ.
ಅ.11ರಂದು ಶ್ರೀ ಶಾರದಾ ಮಾತೆಯ ಕೋಟಿ ಜಪ ಯಜ್ಞದ ಜಪ ಸಮರ್ಪಣೆ ಹಾಗೂ ಲಕ್ಷ ಕುಂಕುಮಾರ್ಚನೆ ಸೇವೆ ಜರುಗಲಿದೆ. ಸಂಜೆ 4ಕ್ಕೆ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ.
ಅ.12 ರಂದು ದೇವಿಗೆ ವಿಶೇಷ ಮಲ್ಲಿಗೆ ಅಲಂಕಾರ ನಡೆಯಲಿದ್ದು, ಸಂಜೆ 4 ಗಂಟೆಗೆ ಆಹ್ವಾನಿತ ಹುಲಿವೇಷ ತಂಡದಿಂದ ಹುಲಿ ವೇಷಧಾರಿಗಳ ಜುಗಲ್‌ಬಂದಿ ನಡೆಯಲಿದೆ. ಶಾಸಕ ಯಶಪಾಲ ಸುವರ್ಣ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಲಿದ್ದಾರೆ. ಅ.13 ರಂದು ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ನಡೆಯಲಿದೆ ಎಂದು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಸತೀಶ ಜಿ, ಕಾರ್ಯದರ್ಶಿ ನಿತಿನ್ ಖಾರ್ವಿ ತಿಳಿಸಿದ್ದಾರೆ.
ಅ.14ರಂದು ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಶಾಸಕ ಗುರ್ಮೆ ಸುರೇಶ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 4ಕ್ಕೆ ವಿಗ್ರಹದ ಜಲಸ್ತಂಭನ ಪುರಮೆರವಣಿಗೆ ಪಂಚಗಂಗಾವಳಿ ನದಿಯಲ್ಲಿ ಜಲಸ್ತಂಭನ ನಡೆಯಲಿದೆ. ಜತೆಗೆ ಸಾಮೂಹಿಕ ಪಂಚಗಂಗಾ ಆರತಿ ಹಾಗೂ ಸುಡುಮದ್ದು ಪ್ರದರ್ಶನ ನಡೆಯಲಿದೆ.