‘ಶೋಲೆ’ಗೆ 50’ ಅಭಿವೃದ್ಧಿಕಾಣದ ‘ಚಂಬಲ್ ಕಣಿವೆ’

Shole Film Ramadevarabetta
Published on

* ಭಾರತೀಯ ಚಿತ್ರರಂಗದಲ್ಲಿ ಮೈಲುಗಲ್ಲು ಸೃಷ್ಟಿಸಿದ ಸಿನಿಮಾ

* ಚಿತ್ರೀಕರಣಗೊಂಡ ರಾಮದೇವರ ಬೆಟ್ಟ ಸುತ್ತಲಿನ ಪ್ರದೇಶ ಅಭಿವೃದ್ಧಿಗೆ ನಿರ್ಲಕ್ಷ್ಯ

* ಪರಿಸರ ಸೂಕ್ಷ್ಮ ವಲಯ ೋಷಣೆಯಿಂದ ಹಿನ್ನಡೆ?

ವಿಭೂತಿಕೆರೆ ಶಿವಲಿಂಗಯ್ಯ, ರಾಮನಗರ

ಇಡೀ ಭಾರತ ಚಿತ್ರರಂಗದಲ್ಲಿ ಐತಿಹಾಸಿಕ ಮೈಲಿಗಲ್ಲು ಸೃಷ್ಟಿಸಿದ ಬಾಲಿವುಡ್‌ನ ‘ಶೋಲೆ’ ಸಿನಿಮಾ(1975 ಆ.15ರಂದು) ಬಿಡುಗಡೆಯಾಗಿ 50 ವರ್ಷವಾಗಿದೆ. ಈ ಚಲನಚಿತ್ರ ಚಿತ್ರೀಕರಣವಾದ ರಾಮನಗರದ ರಾಮದೇವರ ಬೆಟ್ಟ ಮತ್ತು ಸುತ್ತಮುತ್ತ ಪ್ರದೇಶ ಮಾತ್ರ ಇನ್ನೂ ಅಭಿವೃದಿ ಕಾಣದೇ ಹಾಗೆಯೇ ಉಳಿದಿದೆ.

ಹೌದು..! ದೇಶದ ಸಿನಿರಸಿಕರ ಮನಸ್ಸಿನಲ್ಲಿ ಇಂದಿಗೂ ಜೈ (ಅಮಿತಾಬಚ್ಚನ್), ವೀರು(ಧರ್ಮೇಂದ್ರ) ಕಾದಾಟ, ಗಬ್ಬರ್‌ಸಿಂಗ್(ಆಮ್ಜದ್‌ಖಾನ್) ಅಬ್ಬರ, ಬಸಂತಿ(ಹೇಮಾಮಾಲಿನಿ) ನೃತ್ಯ ಅಚ್ಚಳಿಯದೇ ಉಳಿದಿದೆ. ‘ಶೋಲೆ’ಚಿತ್ರ ನಿರ್ಮಾಣದ ವೇಳೆ ಸಿಪ್ಪಿ ಫಿಲಂಸ್‌ನವರು ನಿರ್ಮಿಸಿದ್ದ ರಾಮಘಡ ಎಂಬ ಕೃತಕ ಹಳ್ಳಿಯ ಸೆಟ್ ಇದೀಗ ಇಲ್ಲವಾಗಿದೆ.

ಬೆಂಗಳೂರು ಮಹಾನಗರದ ಸಮೀಪದಲ್ಲಿರುವ ರಾಮನಗರಕ್ಕೆ ಶೋಲೆ ಚಿತ್ರ ಒಂದು ರೀತಿಯ ಬ್ರಾಂಡ್ ಮಾರ್ಕ್‌ನಂತಿತ್ತು. ಉತ್ತರ ಭಾರತದ ಸಾಕಷ್ಟು ಮಂದಿ ಇಂದಿಗೂ ರಾಮನಗರವನ್ನು ಗುರುತಿಸಿರುವುದೇ ಶೋಲೆ ಚಿತ್ರದ ಮೂಲಕ. ವಿಪರ್ಯಾಸವೆಂದರೆ ಭಾರತ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಬ್ಲಾಕ್‌ಬಸ್ಟರ್ ಚಿತ್ರ ಶೋಲೆ ಇಲ್ಲಿ ಚಿತ್ರೀಕರಣಗೊಂಡಿತ್ತು ಎಂಬುದಕ್ಕೆ ಬೆಟ್ಟದ ಕಲ್ಲುಬಂಡೆಗಳು ಹಾಗೂ ಹಳೇ ತಲೆಗಳ ನೆನಪುಗಳಷ್ಟೇ ಸಾಕ್ಷಿಯಾಗಿ ಉಳಿದಿವೆ. ಆ ಪ್ರಸಿದ್ಧಿಯನ್ನು ಬಳಸಿಕೊಂಡು ರಾಮದೇವರ ಬೆಟ್ಟವನ್ನು ಪ್ರವಾಸೀತಾಣವಾಗಿ ಅಭಿವೃದ್ಧಿಗೊಳಿಸಿ ಆ ಮೂಲಕ ಜಿಲ್ಲೆಯ ಪ್ರವಾಸೋದ್ಯಮವನ್ನು ಬೆಳೆಸುವ ಪ್ರಯತ್ನ ಪರಿಣಾಮಕಾರಿಯಾಗಿ ಆಗಲೇ ಇಲ್ಲ.

ರಾಮಘಡ ಹಳ್ಳಿ ಸೆಟ್

‘ಶೋಲೆ’ ಚಿತ್ರೀಕರಣದ ಸಮಯದಲ್ಲಿ ಒಂದುಕಡೆ ಬೆಟ್ಟದ ಕೆಳಭಾಗದಲ್ಲಿ ಹಳ್ಳಿಯ ಸೆಟ್ ಹಾಕಿದ್ದ ಸ್ಥಳದಲ್ಲಿ ಸದ್ಯಕ್ಕೆ ಇರುಳಿಗರ ಕಾಲನಿ ಇದೆ. ಮೂಲ ರಾಮಘಡದ ಸೆಟ್‌ಅನ್ನು ಸಿಪ್ಪಿ ಫಿಲಂಸ್ ತಂಡ ಬೆಟ್ಟದ ತಪ್ಪಲಿನಲ್ಲಿ ನಿರ್ಮಾಣ ಮಾಡಿತ್ತು. ಚಿತ್ರೀಕರಣಗೊಂಡ ಬಳಿಕ ಆರಂಭದ ದಿನಗಳಲ್ಲಿ ಈ ಸೆಟ್ ಅನ್ನು ಹಾಗೇ ಬಿಟ್ಟು ಹೋಗಲಾಗಿತ್ತು. ಕೆಲ ಮನೆಗಳಲ್ಲಿ ಸ್ಥಳೀಯರು ವಾಸವಿದ್ದರು ಎಂದು ಹಿರಿಯರು ಹೇಳುತ್ತಾರಾದರೂ, ಸದ್ಯಕ್ಕೆ ಅಲ್ಲಿ ಈಗ ಯಾವುದೇ ಗುರುತು ಉಳಿದಿಲ್ಲ.

ಹಾಲಿವುಡ್ ಸಿನಿಮಾ ಚಿತ್ರೀಕರಣ

ರಾಮದೇವರ ಬೆಟ್ಟದ ತಪ್ಪಲು ಹಲವು ಚಿತ್ರಗಳ ಚಿತ್ರೀಕರಣದ ನೆಲೆಯಾಗಿದೆ. ಖ್ಯಾತ ಇಂಗ್ಲಿಷ್ ಚಿತ್ರ ‘ದಿ ಪ್ಯಾಸೇಜ್ ಟು ಇಂಡಿಯಾ’ ಸಿನಿಮಾವನ್ನು ಇಲ್ಲಿಯೇ ಚಿತ್ರೀಕರಿಸಲಾಗಿತ್ತು. ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಬೆಟ್ಟವನ್ನು ಕೊರೆದು ಸುರಂಗ ನಿರ್ಮಿಸಿದ್ದು, ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಹಾಗೆಯೇ ಕನ್ನಡ ಚಿತ್ರರಂಗದ ವರನಟ ಡಾ.ರಾಜ್‌ಕುಮಾರ್ ಅವರ ‘ಹುಲಿಯ ಹಾಲಿನ ಮೇವು’, ಬಾಲಿವುಡ್‌ನ ಸನ್ನಿಡಿಯೋಲ್ ನಟನೆಯ ‘ಬೇಥಾಬ್’ ಚಲನಚಿತ್ರ ಸಹ ಇಲ್ಲೇ ಚಿತ್ರೀಕರಣ ಗೊಂಡಿದೆ.

ಚಾರಣಕ್ಕೆ ಸ್ವರ್ಗ

ಪ್ರಸಿದ್ಧ ರಾಮದೇವರ ಬೆಟ್ಟಕ್ಕೆ ಮಾತ್ರ ರಸ್ತೆ ಹಾಗೂ ಇನ್ನಿತರ ಸೌಕರ್ಯಗಳಿವೆ. ಚಾರಣಿಗರ ಪ್ರಸಿದ್ಧ ಸ್ಥಳವಾಗಿರುವ ಇಲ್ಲಿ ಚಾರಣ ಕಲಿಯುವವರಿಗೆ ಸಾಕಷ್ಟು ಅವಕಾಶಗಳಿವೆ. ಅರಣ್ಯ ಇಲಾಖೆಯ ಮೇಲುಸ್ತುವಾರಿಯಲ್ಲಿ ಕೆಲವರು ಚಾರಣ ಮಾಡುವುದನ್ನು ಹೊರತುಪಡಿಸಿದರೆ ಹೊಸದಾಗಿ ಪ್ರವಾಸೋದ್ಯಮ ಅಭಿವೃದ್ಧಿ ಕಂಡಿಲ್ಲ. ಈ ಮಧ್ಯೆ ಶಾಸಕ ಎಚ್.ಎ.ಇಕ್ಬಾಲ್‌ಹುಸೇನ್ ಕಳೆದೆರಡು ತಿಂಗಳ ಹಿಂದೆ ಬೆಟ್ಟಕ್ಕೆ ಭೇಟಿ ನೀಡಿ, ರಾಮದೇವರ ಬೆಟ್ಟವನ್ನು ರಾಜ್ಯದ ಪ್ರಮುಖ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು 2 ಕೋಟಿ ರೂ. ಅನುದಾನ ತರುವುದಾಗಿ ಹೇಳಿ, ಬೆಟ್ಟದಲ್ಲಿ ಒಂದಿಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು ಹೊಸ ಬೆಳವಣಿಗೆ.

ರಣಹದ್ದುಗಳ ರಕ್ಷಿತಾರಣ್ಯ

ರಾಮದೇವರ ಬೆಟ್ಟವನ್ನು ರಣಹದ್ದುಗಳ ರಕ್ಷಿತಾರಣ್ಯ ಎಂದು ಘೋಷಿಸಲಾಗಿದೆ. ಅಪರೂಪದ ಬಿಳಿಯ ಬೆನ್ನಿನ ರಣಹದ್ದುಗಳ ವಾಸಸ್ಥಾನ ಇದಾಗಿದ್ದು, ಅಳಿವಿನ ಅಂಚಿನಲ್ಲಿರುವ ರಣಹದ್ದುಗಳ ರಕ್ಷಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿರುವುದು ಪ್ರವಾಸೋದ್ಯಮ ಅಭಿವೃದ್ಧಿಗೆ ಹಿನ್ನಡೆಯಾಗಿದೆ.

ವರ್ಚುವಲ್ ಶೋಲೆ ವಿಲೇಜ್‌ಗೆ ಸಿಗದ ಅವಕಾಶ

ರಾಮದೇವರ ಬೆಟ್ಟದ ತಪ್ಪಲಿನಲ್ಲಿ ಶೋಲೆ ದೃಶ್ಯಗಳನ್ನು ನೆನಪಿಸುವ ಉದ್ದೇಶದಿಂದ 7.50 ಕೋಟಿ ರೂ. ಅಂದಾಜು ವೆಚ್ಚದಲ್ಲಿ ವರ್ಚುವಲ್ ಶೋಲೆ ವಿಲೇಜ್ ನಿರ್ಮಾಣಕ್ಕೆ ಖಾಸಗಿ ಸಂಸ್ಥೆ ಮುಂದೆ ಬಂದಿತ್ತು. ತ್ರಿಡಿ ಇಮೇಜ್ ಮೂಲಕ ಶೋಲೆ ಚಿತ್ರದ ದೃಶ್ಯಗಳನ್ನು ಸೃಷ್ಟಿಸಿ, ಪ್ರವಾಸಿಗರ ಕಣ್ಮುಂದೆ ಶೋಲೆ ಚಿತ್ರದ ಪಾತ್ರವನ್ನು ತರುವುದು ಇದರ ಉದ್ದೇಶವಾಗಿತ್ತು. ಆದರೆ, ಸರ್ಕಾರ ಅನುಮತಿ ನೀಡದ ಕಾರಣ ಯೋಜನೆ ಕಾರ್ಯಗತವಾಗಲಿಲ್ಲ.

ಚಂಬಲ್ ಕಣಿವೆಯಂತೆ ಕುರುಚಲು ಕಾಡು, ಉದ್ದದ ರೈಲ್ವೆ ಟ್ರ್ಯಾಕ್

ಶೋಲೆ ಚಿತ್ರಕ್ಕೆ ಈ ಸ್ಥಳ ಆಯ್ಕೆ ಮಾಡಿಕೊಂಡಿದ್ದು ಚಿತ್ರದ ಕಥಾಹಂದರ. ಅಂದಿನ ಕಾಲಘಟ್ಟದಲ್ಲಿ ಚಂಬಲ್ ಕಣಿವೆಯಲ್ಲಿ ಡಕಾಯಿತರ ಹಾವಳಿ ತೀವ್ರವಾಗಿತ್ತು. ಕುಖ್ಯಾತ ಡಕಾಯಿತನನ್ನು ಮಣಿಸುವ ಕಥೆಯ ಶೋಲೆ ಚಿತ್ರವನ್ನು ನಿರ್ಮಾಣ ಮಾಡಬೇಕಿದ್ದ ಕಾರಣ ಸಿಪ್ಪಿ ಫಿಲಮ್ಸ್ ಸ್ಥಳದ ಹುಡುಕಾಟದಲ್ಲಿದ್ದಾಗ ಅವರ ಕಣ್ಣಿಗೆ ಬಿದ್ದ ಜಾಗ ರಾಮನಗರದ ರಾಮದೇವರ ಬೆಟ್ಟ. ಈ ಸ್ಥಳದಲ್ಲಿ ಬೆಟ್ಟ-ಗುಡ್ಡಗಳು, ಕುರುಚಲು ಕಾಡು ಹಾಗೂ ಹೆದ್ದಾರಿ ಬದಿಯಲ್ಲಿ ಸಾಕಷ್ಟು ದೂರದ ರೈಲ್ವೆ ಟ್ರ್ಯಾಕ್ ಇದ್ದುದು ಚಿತ್ರೀಕರಣಕ್ಕೆ ಹೇಳಿಮಾಡಿಸಿದಂತಿತ್ತು. ಸುಮಾರು 2 ವರ್ಷಗಳ ಕಾಲ ಶೋಲೆ ಚಿತ್ರೀಕರಣವಾಗಿದ್ದು, ಚಿತ್ರದ ಶೇ.99 ದೃಶ್ಯಗಳನ್ನು ರಾಮದೇವರ ಬೆಟ್ಟದ ತಪ್ಪಲಿನಲ್ಲೇ ಚಿತ್ರೀಕರಿಸಲಾಗಿದೆ. ಚಿತ್ರೀಕರಣ ಸಮಯದಲ್ಲಿ ಇಡೀ ಚಿತ್ರತಂಡ ರಾಮನಗರ ಖಾಸಗಿ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಿತ್ತು. ಚಿತ್ರದ ಅಮಿತಾಭ್ ಬಚ್ಚನ್, ಧರ್ಮೇಂದ್ರ, ಹೇಮಾಮಾಲಿನಿ, ಜಯಾ ಬಾದುರಿ ಸೇರಿ ಘಟಾನುಘಟಿ ನಟ, ನಟಿಯರು, ನಿರ್ದೇಶಕ ರಮೇಶ್ ಸಿಪ್ಪಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿ ಚಿತ್ರೀಕರಣದ ಸಮಯದಲ್ಲಿ ಇಲ್ಲಿಗೆ ಬಂದು ಹೋಗುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ.

ರಾಮನಗರ ಸುತ್ತಮುತ್ತಲಿನ ಬೆಟ್ಟ-ಗುಡ್ಡಗಳು ಪ್ರಕೃತಿದತ್ತ ಎತ್ತರ ಹಾಗೂ ಸೊಗಸಾಗಿವೆ. ಶೋಲೆ ಚಿತ್ರದಿಂದಾಗಿ ರಾಮದೇವರ ಬೆಟ್ಟ, ರಾಮದೇವರ ಬೆಟ್ಟದಿಂದ ಶೋಲೆ ಚಿತ್ರ ದೇಶದಲ್ಲಿ ಒಳ್ಳೆ ಹೆಸರು ಮಾಡಿದವು. ಚಿತ್ರ ಯಶಸ್ಸು ಕಾಣಲು ಸ್ಥಳವೂ ಪ್ರಮುಖವಾಗಿದ್ದು, ಆದರೆ, ಯಶಸ್ವಿ ಸಿನೆಮಾ ಚಿತ್ರೀಕರಣಗೊಂಡ ಸ್ಥಳ ಮಾತ್ರ ಇನ್ನೂ ಅಭಿವೃದ್ಧಿ ಕಂಡಿಲ್ಲ. ಶೋಲೆ ಚಿತ್ರದ ತಾಣವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿದರೆ ಸ್ಥಳೀಯರಿಗೆ ಅನುಕೂಲವಾಗುತ್ತದೆ. ಸರ್ಕಾರ ಗಮನ ಹರಿಸಬೇಕು.ಕಾಳಯ್ಯರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net