ಸರ್ವಜ್ಞ ಪ್ರಾಧಿಕಾರಕ್ಕೆ 50 ಕೋಟಿ ಅನುದಾನ ನಿರೀಕ್ಷೆ

23 hkr 01
Published on

ಹಿರೇಕೆರೂರ: ಸರ್ಕಾರ ಪೂರ್ಣ ಪ್ರಮಾಣದಲ್ಲಿ ಸರ್ವಜ್ಞ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದು, ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ಪ್ರಾಧಿಕಾರಕ್ಕೆ ಕನಿಷ್ಠ 50 ಕೋಟಿ ರೂ. ಅನುದಾನ ಘೊಷಣೆಯಾಗುವ ನಿರೀಕ್ಷೆ ಇದೆ ಎಂದು ಪ್ರಾಧಿಕಾರದ ಸದಸ್ಯ, ಸರ್ವಜ್ಞ ಸ್ಮಾರಕ ಸಮಿತಿ ಅಧ್ಯಕ್ಷ ಎಸ್.ಎಸ್.ಪಾಟೀಲ ಹೇಳಿದರು.

ತಾಲೂಕಿನ ಸರ್ವಜ್ಞನ ಅಬಲೂರು ಗ್ರಾಮದ ರಂಗಮಂದಿರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸರ್ವಜ್ಞ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೃಷಿ ಸಚಿವ ಬಿ.ಸಿ. ಪಾಟೀಲ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಪ್ರಯತ್ನದಿಂದ ಸರ್ವಜ್ಞ ಪ್ರಾಧಿಕಾರ ರಚನೆಯಾಗಿದೆ. ಈಗ ಅನುದಾನ ಬಿಡುಗಡೆಯಾಗಿ ಕಾಗಿನೆಲೆ, ಬಾಡ ಮಾದರಿಯಲ್ಲಿ ಅಬಲೂರು, ಮಾಸೂರು ಅಭಿವೃದ್ಧಿ ಕಾಣಬೇಕಿದೆ. ಈ ನಿಟ್ಟಿನಲ್ಲಿ ಸಚಿವ ಬಿ.ಸಿ. ಪಾಟೀಲ ಅವರೊಂದಿಗೆ ರ್ಚಚಿಸಲಾಗಿದ್ದು, ಈ ಬಜೆಟ್​ನಲ್ಲಿ ಸರ್ವಜ್ಞ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಪತ್ರ ಬರೆಯಲಾಗಿದೆ. ಹಂಪಿ ವಿಶ್ವವಿದ್ಯಾಲಯ ಇಲ್ಲವೆ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸರ್ವಜ್ಞ ಅಧ್ಯಯನ ಪೀಠ ಸ್ಥಾಪಿಸಬೇಕು ಒಂದು ಒತ್ತಾಯಿಸಿದರು.

ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಸರ್ವಜ್ಞ ಜನರ ಕವಿಯಾಗಿ ಜನರ ನಡುವೆ ಇದ್ದು, ಅವರ ಕಷ್ಟಗಳನ್ನು ಅರ್ಥೈಸಿಕೊಂಡು ವಚನ ರಚಿಸಿದ್ದಾರೆ. ಜಾತಿಯ ಸೋಂಕು ಇಟ್ಟುಕೊಳ್ಳದೆ ಮುಕ್ತವಾಗಿ ಬದುಕಿದ ಸರ್ವಜ್ಞ ನಮ್ಮ ಬದುಕಿಗೆ ಹತ್ತಿರ ಆಗಿದ್ದಾರೆ ಎಂದರು.

ಸರ್ವಜ್ಞ ಪ್ರಾಧಿಕಾರದ ಸದಸ್ಯ ಎಂ.ಎಚ್. ಹರವಿಶೆಟ್ಟರ್ ಮಾತನಾಡಿ, ಜನಸಾಮಾನ್ಯರಿಗೆ ಪಾಂಡಿತ್ಯ ಅರ್ಥವಾಗದ ಕಾಲಘಟ್ಟದಲ್ಲಿ ಜನಸಾಮಾನ್ಯರ ಮನಸ್ಸಿಗೆ ಮುಟ್ಟುವಂತೆ ತ್ರಿಪದಿಗಳ ರೂಪದಲ್ಲಿ ವಚನಗಳನ್ನು ರಚಿಸಿದ ಸರ್ವಜ್ಞ ಶೇಷ್ಠ ದಾರ್ಶನಿಕರಾಗಿದ್ದಾರೆ ಎಂದರು.

ಸರ್ವಜ್ಞ ಪ್ರಾಧಿಕಾರದ ಸದಸ್ಯ, ಸಂಶೋಧಕ ಡಾ. ಭೋಜರಾಜ ಪಾಟೀಲ ಮಾತನಾಡಿ, ನಾನು ರಚಿಸಿರುವ ಸಂಶೋಧನಾ ಗ್ರಂಥ ನಾಗರಖಂಡ 70 ಈ ಊರಿನ ಇತಿಹಾಸದ ಬಗ್ಗೆ ಬೆಳಕು ಚೆಲ್ಲುತ್ತದೆ. ಮೊದಲು ಇಲ್ಲಿ ಅಂಬಾಲ ಎನ್ನುವ ರಾಣಿ ಇದ್ದಳು, ಅವಳ ಹೆಸರೆ ಊರಿಗೆ ಬಂದಿದ್ದು, ಅಂಬಲಾ ಎಂಬುದೇ ಈಗ ಅಬಲೂರು ಆಗಿದೆ. ಯಾರು ಏನೇ ಹೇಳಿದರೂ ಸರ್ವಜ್ಞನ ಜನ್ಮಸ್ಥಳ ಅಬಲೂರು ಇತಿಹಾಸವನ್ನು ಎಂದಿಗೂ ತಿರುಚಲು ಸಾಧ್ಯವಿಲ್ಲ ಎಂದರು.

ಇದಕ್ಕೂ ಮುನ್ನ ಗ್ರಾಮದ ಪ್ರಾಥಮಿಕ ಶಾಲೆಯ ಆವರಣ ಹಾಗೂ ಸೋಮೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಸರ್ವಜ್ಞನ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಗ್ರಾಪಂ ಅಧ್ಯಕ್ಷೆ ಗೀತಾ ರವೀಂದ್ರ ಇಂಗಳಗೊಂದಿ ಅಧ್ಯಕ್ಷತೆ ವಹಿಸಿದ್ದರು. ಸರ್ವಜ್ಞ ಪ್ರಾಧಿಕಾರ ಪ್ರಾಧಿಕಾರದ ಸದಸ್ಯ ನಾಗರಾಜ ಕುರುವತ್ತೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ವಜ್ಞ ಪ್ರಾಧಿಕಾರದ ಸದಸ್ಯರಾದ ಮೃತ್ಯುಂಜಯ ಕೆಂಬಿ, ಶಂಕ್ರಪ್ಪ ಗೌಡ್ರ, ಪ್ರಮುಖರಾದ ಬಸವರಾಜ ಮಳವಳ್ಳಿ, ಲೇಖಕಿ ಲೀಲಾವತಿ ಪಾಟೀಲ, ಗ್ರಾಪಂ ಉಪಾಧ್ಯಕ್ಷ ಜಗದೀಶ ದಂಡಗಿಹಳ್ಳಿ, ಸದಸ್ಯರಾದ ಉಜ್ಜನಗೌಡ ಮಳವಳ್ಳಿ, ಯಲ್ಲಮ್ಮ ಆಡೂರ, ಹನುಮಂತಪ್ಪ ದೊಡ್ಡಮನಿ, ರತ್ನಾ ಮುದಿಗೌಡ್ರ, ಹುಚ್ಚಪ್ಪ ದೊಡ್ಡಮನಿ, ತಾಪಂ ಮಾಜಿ ಸದಸ್ಯೆ ರೂಪಾ ಆಡೂರ, ಎಸ್​ಡಿಎಂಸಿ ಅಧ್ಯಕ್ಷ ಜಗದೀಶ ಮಳವಳ್ಳಿ, ಮುಖ್ಯಶಿಕ್ಷಕರಾದ ಎಸ್.ಜಿ. ಮಾಯಣ್ಣನವರ, ಜಿ.ಎಂ. ಕುರುಬರ, ಪಿಡಿಒ ಬಸವರಾಜ ಕೆ., ಗ್ರಾಮಸ್ಥರು ಇದ್ದರು. ನಾಗರಾಜ ಭೋಗಾವಿ, ವೀರೇಶಗೌಡ್ರ, ಪ್ರವೀಣ ಕುರುವತ್ತೇರ, ರಾಜು ಮುದಗೋಳ, ಭರತ್ ಕಣವೇರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net