

ಬಂಟ್ವಾಳ: ಪೊಳಲಿ ಬಳಿಯ ಅಡ್ಡೂರು ಸೇತುವೆಗೆ 50 ಕೋಟಿ ರೂ.ಗಳಿಗೆ ರೇಖಾ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಅನುದಾನ ಲಭ್ಯತೆಗೆ ಅನುಗುಣವಾಗಿ ನಿಯಮಾನುಸಾರ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಅವರು ಉತ್ತರಿಸಿ, ಕಬಕ- ಸುರತ್ಕಲ್ ರಾಜ್ಯ ಹೆದ್ದಾರಿಯ ಪೊಳಲಿ ಬಳಿಯ ಅಡ್ಡೂರು ಸೇತುವೆ ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ ರಸ್ತೆ ಆಸ್ತಿಗಳ ನಿರ್ವಹಣಾ ಕೇಂದ್ರ ಬೆಂಗಳೂರು ಹಾಗೂ ಕಾಂಕ್ರೀಟ್ ಸ್ಟ್ರಕ್ಚರಲ್ ಫಾರೆನ್ಸಿಕ್ ಕನ್ಸಲ್ಟೆಂಟ್ ಬೆಂಗಳೂರು ಜಂಟಿ ಪರಿವೀಕ್ಷಣೆ ಮಾಡಿದ್ದು ಸೇತುವೆಯ ಸಾಂದ್ರತೆಯ ಬಗ್ಗೆ ವರದಿ ನೀಡಿದೆ. ವರದಿಗೆ ಅನುಗುಣವಾಗಿ ಅಂದಾಜು ಪಟ್ಟಿಯನ್ನು 2023-24ನೇ ಸಾಲಿನ ಲೋಕೋಪಯೋಗಿ ಇಲಾಖೆಯ ಏಕರೂಪ ದರಪಟ್ಟಿ ಪ್ರಕಾರ ಸೇತುವೆ ದುರಸ್ತಿ ಕಾಮಗಾರಿಗಾಗಿ 6.10 ಲಕ್ಷ ರೂ.ಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಅಡ್ಡೂರು ಸೇತುವೆ 1970ರಲ್ಲಿ ನಿರ್ಮಾಣಗೊಂಡಿದ್ದು, ತೀರಾ ಹಳೆಯದಾಗಿದೆ. ಅತಿಯಾದ ಮರಳು ಗಣಿಗಾರಿಕೆಯಿಂದ ಸೇತುವೆಗೆ ಹಾನಿಯಾಗಿದ್ದು, ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿರುವುದರಿಂದ ಜಿಲ್ಲಾಧಿಕಾರಿ ಸಂಚಾರವನ್ನು ನಿರ್ಬಂಧಿಸಿ ಆದೇಶಿಸಿದ್ದಾರೆ. ಅದರಂತೆ ಸೇತುವೆಯ ಎರಡು ಭಾಗದಲ್ಲಿ ತಾತ್ಕಾಲಿಕ ಚೆಕ್‌ಪೋಸ್ಟ್ ಹಾಗೂ 2.75 ಮೀಟರ್ ಎತ್ತರದ ರಿಟ್ರೋ ರಿಫ್ಲ್ಲೆಕ್ಟಿವ್ ಗ್ಯಾಂಟ್ರಿ ಬೋರ್ಡ್‌ಗಳನ್ನು ಹಾಕಿ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಸಣ್ಣ ವಾಹನಗಳು ಸೇತುವೆಯ ಮೇಲೆ ಸಂಚರಿಸಲು ಅನುವು ಮಾಡಲಾಗಿದೆ. ಬದಲಿ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.