

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ನಮ್ಮ ಭವ್ಯ ಕಲೆ, ಸಂಸ್ಕೃತಿ ಸಂಪತ್ತಿನ ಜ್ಞಾನ ಹೆಚ್ಚಳಕ್ಕೆ ಪೂರಕವಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಪುತ್ತಿಗೆ ವಿವೇಕಾನಂದ ನಗರದ ವನಜಾಕ್ಷಿ ಕೆ.ಶ್ರೀಪತಿ ಭಟ್ ಬಯಲು ರಂಗ ಮಂದಿರದಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸಿರುವ 'ಆಳ್ವಾಸ್ ವಿರಾಸತ್’ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ಹಾಗೂ ಮುಂದಿನ ಯುವಜನತೆಗೆ ನಮ್ಮ ಕಲೆ, ಸಂಸ್ಕೃತಿಯ ವೈಭವವನ್ನು ಪರಿಚಯಿಸಲು ಆಳ್ವಾಸ್ ವಿರಾಸತ್ ಪ್ರಮುಖ ವೇದಿಕೆ. ಇಲ್ಲಿ ಸಂಸ್ಕೃತಿ ಹಾಗೂ ಸಾಹಿತ್ಯದ ಹೃದಯ ಒಗ್ಗೂಡಿಸುವ ಕಾರ್ಯವಾಗಿದೆ. ನಮ್ಮ ಮನಸ್ಸು ಪ್ರಫುಲ್ಲಿತವಾಗಲು ಸಾಂಸ್ಕೃತಿಕ ಸಂಪತ್ತಿನ ಜ್ಞಾನ ಹೆಚ್ಚಬೇಕು. ಆಳ್ವಾಸ್ ಸಂಸ್ಥೆ ಕಾರ್ಯಕ್ರಮಗಳು ಸಂಸ್ಕೃತಿ ಹಾಗೂ ಸಮಾಜವನ್ನು ಗೌರವಿಸಿ ಮುನ್ನಡೆಸುವ ಕಾರ್ಯ ಮಾಡುತ್ತಿದೆ. ಮಣ್ಣಿನ ಸಂಸ್ಕೃತಿ, ಭೂಮಿ, ತಾಯಿನಾಡನ್ನು ಪ್ರೀತಿಸುವ, ಕೃಷಿ ಬದುಕನ್ನು ಅಪ್ಪಿಕೊಳ್ಳುವ ಇಂತಹ ವಿಶಿಷ್ಟ ಕಾರ್ಯಕ್ರಮಗಳು ಡಾ.ಎಂ.ಮೋಹನ ಆಳ್ವರಿಂದ ಮಾತ್ರ ಸಾಧ್ಯವಾಗಲಿದೆ. ಅಂತಹ ಹೃದಯ ವೈಶಾಲ್ಯ ಅವರಿಗಿದೆ ಎಂದರು.
ಆಳ್ವಾಸ್ ಸಂಸ್ಥೆ ಕರಾವಳಿಯ ಕಿರೀಟ
ಅಧ್ಯಕ್ಷತೆ ವಹಿಸಿದ್ದ ಎಂಆರ್‌ಜಿ ಗ್ರೂಪ್ ಆಡಳಿತ ನಿರ್ದೇಶ ಕೆ.ಪ್ರಕಾಶ್ ಶೆಟ್ಟಿ ಮಾತನಾಡಿ, ಜೈನರ ಪವಿತ್ರ ಕಾಶಿ ಇಂದು ಡಾ.ಎಂ.ಮೋಹನ ಆಳ್ವರ ದೂರದೃಷ್ಟಿ ಹಾಗೂ ಪರಿಶ್ರಮದಿಂದ ಶಿಕ್ಷಣ ಕಾಶಿಯಾಗಿ ಬೆಳೆಯುತ್ತಿದೆ. 4 ದಶಕಗಳ ಹಿಂದೆ ಮೋಹನ ಆಳ್ವರು ಕೈಗೊಂಡ ಶಿಕ್ಷಣದ ಸಂಕಲ್ಪ ಇಂದು ಹೆಮ್ಮರವಾಗಿ ಬೆಳೆದು ಪ್ರಪಂಚವೇ ಮೂಡುಬಿದಿರೆಯನ್ನು ಶಿಕ್ಷಣ ಸ್ವರ್ಗವಾಗಿ ಕಾಣುತ್ತಿದೆ. ಈ ಸಾಧನೆಗೆ ಅವರ ಕಠಿಣ ಶ್ರಮ ಕಾರಣವಾಗಿದ್ದು, ಆಳ್ವಾಸ್ ವಿದ್ಯಾಸಂಸ್ಥೆ ಕರಾವಳಿಯ ಕಿರೀಟವಾಗಿ ಮೂಡಿಬಂದಿದೆ ಎಂದರು.
ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಮಾಜಿ ಶಾಸಕ ಅಭಯಚಂದ್ರ ಜೈನ್, ಭಾರತ್ ಸ್ಕೌಟ್ಸ್ ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ಅದಾನಿ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಪ್ರಮುಖರಾದ ಉದ್ಯಮಿ ಶ್ರೀಪತಿ ಭಟ್, ಚೌಟರ ಅರಮನೆ ಮೂಡುಬಿದಿರೆಯ ಕುಲದೀಪ ಎಂ., ಉದ್ಯಮಿ ಮುಸ್ತಾಫ ಎಸ್.ಎಂ., ಉದ್ಯಮಿ ಪ್ರವೀಣ್ ಕುಮಾರ್, ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ, ಪ್ರದೀಪ್‌ಕುಮಾರ್ ಕಲ್ಕೂರ, ಎಂ.ಬಿ.ಪುರಾಣಿಕ್ ಮತ್ತಿತರರಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸ್ವಾಗತಿಸಿದರು. ವೇಣುಗೋಪಾಲ್ ಶೆಟ್ಟಿ ನಿರೂಪಿಸಿದರು.
ಆಳ್ವಾಸ್ ವಿರಾಸತ್ ರಥಾರತಿ
ಇಂದು ಆಳ್ವಾಸ್ ವಿರಾಸತ್ ಪ್ರಶಸ್ತಿ ಪ್ರದಾನ
ಡಿ.11ರಂದು ಸಂಜೆ 5.45ರಿಂದ 6.30ರವರೆಗೆ ಆಳ್ವಾಸ್ ವಿರಾಸತ್-2024 ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಖ್ಯಾತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನಿಸಲಾಗುವುದು.
ಆಳ್ವಾಸ್ ವಿರಾಸತ್ ಕೇವಲ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಸೀಮಿತವಾಗಿರದೆ ದೇಶದ ಯುವ ಸಂಪತ್ತಿಗೆ ಕಲೆ, ಸಂಸ್ಕೃತಿ, ಆಚರಣೆಗಳ ಜ್ಞಾನ ನೀಡುವ ಕಾರ್ಯ ಮಾಡುತ್ತಿದೆ. ಶಿಕ್ಷಣದ ಜತೆ ಸಂಸ್ಕೃತಿಯ ಪರಿಚಯ ಆಳ್ವಾಸ್ ಶಿಕ್ಷಣದ ಮೂಲ ಉದ್ದೇಶ. ಅಂದು ಒಂದು ವಿದ್ಯಾಸಂಸ್ಥೆಗೆ ಸೀಮಿತವಾಗಿದ್ದ ಈ ಕಾರ್ಯಕ್ರಮ ಇಂದು ರಾಷ್ಟ್ರಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ರೂಪುಗೊಂಡಿದೆ. ಆ ಮೂಲಕ ಶಿಕ್ಷಣದ ಜತೆ ಜತೆಗೆ ಸಂಸ್ಕೃತಿ ಅನಾವರಣ ಕಾರ್ಯವೂ ನಡೆಯುತ್ತಿದೆ. ಡಾ.ಎಂ.ಮೋಹನ್ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ